Advertisement

7ನೇ ಆರ್ಥಿಕ ಗಣತಿಗೆ ಸಿಎಂ ಚಾಲನೆ

11:23 PM Nov 06, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ಏಳನೇ ಆರ್ಥಿಕ ಗಣತಿ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನಾ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Advertisement

ಕಾರ್ಯಕ್ರಮದಲ್ಲಿ ಗಣತಿ ಅಧಿಕಾರಿಗಳು ಮೊದಲನೆಯದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದಲೇ ಮಾಹಿತಿ ಪಡೆದರು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಾ? ನೀವು ಉದ್ಯೋಗ ಏನು ಮಾಡುತ್ತೀರಾ? ನಿಮಗೆ ಎಷ್ಟು ಆದಾಯ ಬರುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಂಡರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಗಣತಿದಾರರಿಗೆ ಕೆಲವು ಸಲಹೆ ನೀಡಿದರು. ಆರ್ಥಿಕ ಗಣತಿಗೆ ಹೋದಾಗ ಸಾರ್ವಜನಿಕರಿಂದ ನಿಖರ ಮಾಹಿತಿ ಪಡೆಯಬೇಕು. ಅವರಿಂದ ನಿಖರ ಮಾಹಿತಿ ದೊರೆತರೆ ದೇಶದಲ್ಲಿ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಗಣತಿ ಮಾಡಲು ಹೋದಾಗ ಕೆಲವು ಜನರು ಮುಜುಗರ ಪಡಬಹುದು ಅಥವಾ ಮಾಹಿತಿ ನೀಡಲು ನಿರಾಕರಿಸಬಹುದು.

ಅವರಿಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸಿ, ವಾಸ್ತವ ಮಾಹಿತಿ ಸಂಗ್ರಹಿಸುವಂತೆ ಸಲಹೆ ನೀಡಿದರು. ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಹಾಜರಿದ್ದರು.

ಪೊಲೀಸ್‌ ಇಲಾಖೆ ಆಧುನೀಕರಣಕ್ಕೆ ಸರ್ಕಾರ ಬದ್ಧ: ಪೊಲೀಸ್‌ ಇಲಾಖೆ ಆಧುನೀಕರಣಗೊಳ್ಳಲು ಅಗತ್ಯ ನೆರವು ಹಾಗೂ ಪೊಲೀಸರಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಇಲಾಖೆಯ ವಿಭಾಗಗಳೊಂದಿಗೆ ಸಂಪರ್ಕ ಸಾಧಿಸಲು ಅನುಕೂಲ, ಪ್ರಕೃತಿ ವಿಕೋಪ, ಗಂಭೀರ ಸ್ವರೂಪದ ಅಪರಾಧಗಳನ್ನು ಪತ್ತೆಹಚ್ಚಲು ಕಮಾಂಡ್‌ ಕೇಂದ್ರ ಅನುಕೂಲವಾಗಲಿದೆ.

Advertisement

ಇದೇ ಮಾದರಿಯಲ್ಲಿ ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಧಾರವಾಡದಲ್ಲಿಯೂ ಕೇಂದ್ರ ಆರಂಭಿಸಲು ಕ್ರಮ ವಹಿಸಲಾಗುವುದು ಎಂದರು.  ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಮುಂದಿನ ವರ್ಷದೊಳಗೆ ಪ್ರತಿಯೊಬ್ಬ ಪೊಲೀಸರಿಗೂ ವಸತಿ ನಿರ್ಮಾಣ ಮಾಡಿಕೊಡಬೇಕೆಂಬ ಗುರಿ ಇದೆ ಎಂದರು.

ರಾಜ್ಯವನ್ನು ಅಪರಾಧ ಮುಕ್ತವನ್ನಾಗಿಸಲು ಪೊಲೀಸ್‌ ಇಲಾಖೆ ಶ್ರಮ ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧಗಳನ್ನು ಕಡಿಮೆ ಮಾಡುವಲ್ಲಿ ಇಲಾಖೆ ಕೈಗೊಳ್ಳುವ ನಿರ್ಧಾರಗಳು ಸರ್ಕಾರದ ಘನತೆ ಹೆಚ್ಚಿಸಲಿವೆ ಎಂದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿಪಿ ನೀಲಮಣಿ ರಾಜು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಶಾಸಕ ಎನ್‌.ಎ.ಹ್ಯಾರಿಸ್‌, ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ಥಿಕ ಗಣತಿ ಏಕೆ?: ದೇಶದ ಪ್ರತಿ ಕುಟುಂಬದ ಆರ್ಥಿಕ ಪರಿಸ್ಥಿತಿ ಅರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಲು ಅನುಕೂಲ ಕಲ್ಪಿಸುವ ಸಲುವಾಗಿ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ನವೆಂಬರ್‌ 15 ರಿಂದ ಮಾರ್ಚ್‌ 2020ರ ವರೆಗೆ ಆರ್ಥಿಕ ಗಣತಿ ಕಾರ್ಯ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್‌ ಮೂಲಕ ಗಣತಿ ಕಾರ್ಯ ನಡೆಸಲಾಗುತ್ತಿದೆ.

ಕೇಂದ್ರೀಯ ಕಮಾಂಡ್‌ ಸೆಂಟರ್‌ ಅಸ್ತಿತ್ವಕ್ಕೆ
ಬೆಂಗಳೂರು: ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳ ಸಂಪರ್ಕ, ಭದ್ರತಾ ವ್ಯವಸ್ಥೆಗಳ ನಿರ್ವಹಣೆ ನಿಯಂತ್ರಿಸಲು ಅಗತ್ಯವಾದ “ಕೇಂದ್ರೀಯ ಕಮಾಂಡ್‌ ಸೆಂಟರ್‌’ ಸದ್ಯದ ಋಲ್ಲಿಯೇ ನಿರ್ಮಾಣವಾಗಲಿದೆ. ಜನರಲ್‌ ತಿಮ್ಮಯ್ಯ ರಸ್ತೆಯಲ್ಲಿರುವ ಕೆಎಸ್‌ಆರ್‌ಪಿ 1ನೇ ಬೆಟಾಲಿಯನ್‌ ಪ್ರದೇಶದಲ್ಲಿ “ಕೇಂದ್ರೀಯ ಕಮಾಂಡ್‌ ಸೆಂಟರ್‌’ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ಕೇಂದ್ರದ ಕಾರ್ಯಗಳೇನು?
-ಸುಮಾರು 80 ಕೋಟಿ ರೂ.ವೆಚ್ಚದಲ್ಲಿ ಏಳಂತಸ್ತಿನ ಕಮಾಂಡ್‌ ಸೆಂಟರ್‌ ನಿರ್ಮಾಣ ಆಗಲಿದ್ದು, ಇದೇ ಕಟ್ಟಡದಲ್ಲಿ ಇಲಾಖೆಯ ವಿವಿಧ ವಿಭಾಗಗಳ ನಡುವಣ ಸಂಪರ್ಕ ವ್ಯವಸ್ಥೆಯೂ ಕಾರ್ಯ ನಿರ್ವಹಿಸಲಿದೆ.

-ರಾಜ್ಯದ ಆಂತರಿಕ ಭದ್ರತೆಯ ಚಟುವಟಿಕೆಗಳು ಕೂಡ ನಡೆಯಲಿವೆ.

-ಪೊಲೀಸ್‌ ಇಲಾಖೆಯ ಎಲ್ಲ ವಿಭಾಗಗಳಿಗೂ ಪ್ರತಿಯೊಂದು ಮಾಹಿತಿ ಕಮಾಂಡ್‌ ಕೇಂದ್ರದಿಂದಲೇ ರವಾನೆಯಾಗಲಿದೆ. ಇದರಿಂದ ಕ್ಷಿಪ್ರಗತಿಯ ಸಂಪರ್ಕ ಸಾಧನೆ, ಜತೆಗೆ ಪರಿಹಾರೋಪಾಯ, ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ.

-ತುರ್ತು ಕಾರ್ಯಾಚರಣೆ ಕೇಂದ್ರ, ಇಲಾಖೆಯ ದತ್ತಾಂಶ ಕ್ರೋಢೀಕರಣ ವಿಭಾಗ, ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ಕೂಡ ಇಲ್ಲಿ ನಡೆಯಲಿದೆ.

-ರಾಜ್ಯದಲ್ಲಿ ಭೂಕಂಪ, ಪ್ರವಾಹ, ಕಾನೂನು ಸುವ್ಯವಸ್ಥೆ ಕದಡುವ ಕೃತ್ಯಗಳು (ಭಯೋತ್ಪಾದಕ ಘಟನೆಗಳು) ಕೋಮು ಗಲಭೆ ಮುಂತಾದ ಘಟನೆಗಳು ಸಂಭವಿಸಿದರೆ ಕಮಾಂಡ್‌ ಸೆಂಟರ್‌ನಿಂದ ಎಲ್ಲ ವಿಭಾಗಗಳಲ್ಲಿ ಕೆಲವೇ ಕ್ಷಣಗಳಲ್ಲಿ ಮಾಹಿತಿ ರವಾನೆಯಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಬಹುದು.

-ಸದ್ಯ, ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ 112 ತುರ್ತು ಕರೆ ನಿರ್ವಹಣೆ ಕಾರ್ಯಾಚರಣೆ, ಸಾಮಾಜಿಕ ಜಾಲತಾಣ ವಿಭಾಗ ಇನ್ನಿತರ ತಾಂತ್ರಿಕ ಕಾರ್ಯ ವಿಭಾಗಗಳು ಕೇಂದ್ರದಿಂದಲೇ ಕಾರ್ಯ ನಿರ್ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next