Advertisement

ಕಾರ್ಮಿಕ ಭವನ ಕಟ್ಟಡ ಉದ್ಘಾಟಿಸಿದ ಸಿಎಂ

05:30 PM Dec 30, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಕೃಷ್ಣಾಪೂರದ ಚೈತನ್ಯ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಕಾರ್ಮಿಕ ಭವನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಉದ್ಘಾಟಿಸಿದರು.

Advertisement

ಇದೇ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ರೂಪಿಸಿರುವ ಸಂಚಾರಿ ಆರೋಗ್ಯ ಕ್ಲಿನಿಕ್‌- ಶ್ರಮಿಕ ಸಂಜೀವಿನಿಯ ಮೂರು ವಾಹನಗಳಿಗೆ ಚಾಲನೆ ನೀಡಿ, ಮುಂದಿನ ಆಯವ್ಯಯದಲ್ಲಿ ಶ್ರಮಿಕ ಸಂಜೀವಿನಿ ಸಂಚಾರಿ ಕ್ಲಿನಿಕ್‌ಗೆ ಹೆಚ್ಚಿನ ಅನುದಾನ ಮೀಸಲಿರಿಸುವುದಾಗಿ ಭರವಸೆ ನೀಡಿದರು.

ನೂತನ ಕಾರ್ಮಿಕ ಭವನದ ವಿಶೇಷತೆ:
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 21ಗುಂಟೆ ಜಾಗೆಯಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಿಸಲಾಗಿದೆ. ಕಾರ್ಮಿಕ ಭವನವು ಜಿ+2 ಮಹಡಿಗಳನ್ನೊಳಗೊಂಡಿದೆ. ತಲಾ 370ಚ. ಮೀ.ಗಳಲ್ಲಿ ನಿರ್ಮಾಣಗೊಂಡ ಪ್ರತಿ ಮಹಡಿಗಳು ಕಚೇರಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನುಕೂಲಕರವಾಗಿವೆ. ಲಿಫ್ಟ್‌, ರ್‍ಯಾಂಪ್‌, ಕುಡಿಯುವ ನೀರು, ಶೌಚಾಲಯ ಇನ್ನಿತರೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.

ಈ ಕಾರ್ಮಿಕ ಭವನದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ಕಾರ್ಮಿಕ ಉಪ ವಿಭಾಗಾಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಮುಂದಿನ ದಿನಮಾನಗಳಲ್ಲಿ ಕಾರ್ಖಾನೆಗಳು, ಬಾಯ್ಲರ್ಸ್‌, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಕಚೇರಿಗಳು
ಸಹ ಕಾರ್ಯ ನಿರ್ವಹಿಸಲಿವೆ.

ಕಾರ್ಮಿಕ ಸಚಿವ ಅರಬೈಲು ಶಿವರಾಮ ಹೆಬ್ಬಾರ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ, ಪ್ರವಾಸೋದ್ಯಮ, ಪರಿಸರ ಮತ್ತು ಜೈವಿಕ ವಿಜ್ಞಾನ ಸಚಿವ ಆನಂದ ಸಿಂಗ್‌, ಕಾರ್ಮಿಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ|ಜಿ.ಕಲ್ಪನಾ, ಕಾರ್ಮಿಕ ಆಯುಕ್ತ ಅಕ್ರಂ ಪಾಷ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುಪ್ರಸಾದ ಎಂ.ಪಿ., ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಆಯುಕ್ತೆ ಶ್ವೇತಾ ಸಂಗಮ, ಡಿಸಿಪಿ ಸಾಹೀಲ ಬಾಗ್ಲಾ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next