ಚನ್ನಪಟ್ಟಣ: ಸಿಎಂ ತವರು ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಕಸ ವಿಲೇವಾರಿ ಮತ್ತು ಚರಂಡಿ ಸಮಸ್ಯೆಯೇ ಹೆಚ್ಚಾಗಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲದೇ ನಿವಾಸಿಗಳು ಸಾಂಕ್ರಾಮಿಕ ರೋಗದ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
ನಗರಸಭೆ ಉಪಾಧ್ಯಕ್ಷರು ಗೆಲುವು ಸಾಧಿಸಿರುವ 17ನೇ ವಾರ್ಡ್‌ನಲ್ಲಿ ಚರಂಡಿ, ರಸ್ತೆ ಸಮಸ್ಯೆಗಳು ಸಾಮಾನ್ಯವಾಗಿದೆ. ಕೆಲವು ರಸ್ತೆಗಳು ಮಣ್ಣಿನ ರಸ್ತೆಗಳಾಗಿಯೇ ಇವೆ. ಇನ್ನೂ ಕೆಲವು ಯುಜಿಡಿ ಕಾಮಗಾರಿಯಿಂದಾಗಿ ಅಸ್ತಿತ್ವ ಕಳೆದುಕೊಂಡಿವೆ. ಕಾಂಕ್ರೀಟ್ ರಸ್ತೆಗಳಾಗಿರುವ ಕಡೆಗಳಲ್ಲಿ ಚರಂಡಿಗಳು ಅಲ್ಲಲ್ಲಿ ಮುಚ್ಚಿಕೊಂಡು ಕೊಳಚೆ ನೀರು ಹರಿಯಲಾಗದೆ ಅಲ್ಲೇ ನಿಂತು ಗಬ್ಬುನಾರುವ ಸ್ಥಿತಿ ಇದೆ.
ಚರಂಡಿಗಳಲ್ಲಿ ಹೂಳು ತುಂಬಿದೆ: ಮೂರ್ತಿಮಹಲ್ ರಸ್ತೆಯುದ್ದಕ್ಕೂ ಇರುವ ಚರಂಡಿಯಲ್ಲಿ ಸಮರ್ಪಕವಾಗಿ ಕೊಳಚೆ ನೀರು ಹರಿಯುತ್ತಿಲ್ಲ. ಚರಂಡಿಗೇ ಶೌಚದ ಸಂಪರ್ಕಕೊಟ್ಟಿರುವುದರಿಂದ ಗಬ್ಬುನಾರುತ್ತಿದೆ. ಇದರ ಜತೆಗೆ ಅಲ್ಲಿ ಸಾಲಾಗಿರುವ ಮಾಂಸದ ಅಂಗಡಿಗಳ ತ್ಯಾಜ್ಯ ತಿನ್ನಲು ಬರುವ ನಾಯಿಗಳ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ರಸ್ತೆಬದಿಯ ಎರಡೂ ಚರಂಡಿಯಲ್ಲಿ ಹೂಳು ತುಂಬಿಕೊಂಡಿವೆ. ಮೂರ್ತಿಮಹಲ್‌ನಿಂದ ನಿಂಬೇಹಣ್ಣು ಸರ್ಕಲ್‌ವರೆಗಿನ ರಸ್ತೆ, ಚಿತ್ತಾರಗೇರಿ, ಎಂ.ಜಿ.ರಸ್ತೆಯ ಅಡ್ಡರಸ್ತೆಗಳಲ್ಲಿನ ಚರಂಡಿಗಳ ಸ್ಥಿತಿಯೂ ಹೀಗೆಯೇ ಇದೆ.
ರಸ್ತೆಬದಿಯಲ್ಲಿಯೇ ರಾಶಿ ಕಸ: ಇನ್ನೂ ವಾರ್ಡ್‌ಗಳಲ್ಲಿ ಕಸದ ಸಮಸ್ಯೆಯೂ ಹೆಚ್ಚಾಗಿದೆ. ಅಲ್ಲಲ್ಲಿ ರಸ್ತೆಬದಿಯಲ್ಲಿಯೇ ಕಸವನ್ನು ರಾಶಿ ಹಾಕಲಾಗುತ್ತಿದೆ. ಸಮರ್ಪಕವಾಗಿ ವಿಲೇವಾರಿ ಮಾಡದ ಪರಿಣಾಮ ವಾಸನೆಯಿಂದ ನಿವಾಸಿಗಳು ನೆಮ್ಮದಿ ಬದುಕಿನಿಂದ ದೂರವೇ ಉಳಿದಿದ್ದಾರೆ. ಖಾಲಿ ನಿವೇಶನಗಳ ಬಳಿಯ ಚರಂಡಿಗಳು ಕಸದಿಂದ ತುಂಬಿದೆ. ಕೆಲ ವಾರ್ಡ್‌ನಲ್ಲಿ ಮಾಂಸದ ಅಂಗಡಿಗಳು ಸಾಕಷ್ಟಿದ್ದು, ಅವುಗಳನ್ನು ಮಾಂಸದ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕಾದ ಅಗತ್ಯವಿದೆ. ಹಾಗಾದರೆ ಮಾತ್ರ ಸ್ವಚ್ಛತೆ ಕಾಪಾಡಿದಂತಾಗುತ್ತದೆ.
ನಗರದಲ್ಲಿ ಚರಂಡಿ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ. ಹೂಳು ಎತ್ತುವ ಕೆಲಸ ಪ್ರಗತಿಯಲ್ಲಿದೆ. ಹಾಗೆಯೇ ಅಡ್ಡರಸ್ತೆಗಳಲ್ಲಿ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಚರಂಡಿ ಕಾಮಗಾರಿ ಮುಗಿದ ನಂತರ ರಸ್ತೆ ನಿರ್ಮಾಣ ಮಾಡಲಾಗುವುದು. ಈಗಾಗಲೇ ಟೆಂಡರ್ ಸಹ ಆಗಿ, ಕಾರ್ಯಾದೇಶ ಆಗಿದೆ. ಕಸದ ಸಮಸ್ಯೆ ವಾರದಿಂದೀಚೆಗೆ ಎದುರಾಗಿದೆ. ಈ ಹಿಂದೆ ಪ್ರತಿ ಎರಡು ದಿನಗಳಿಗೊಮ್ಮೆ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಸ್ಥಳದ ಅಭಾವದಿಂದ ಸಮಸ್ಯೆ ಬಂದಿದೆ. ಶೀಘ್ರ ಸರಿಪಡಿಸಲಾಗುವುದು.
-ಸರಳ ಸೋಮಶೇಖರ್, ಉಪಾಧ್ಯಕ್ಷರು, ನಗರಸಭೆ
ಚರಂಡಿಗಳಲ್ಲಿ ಹೂಳೆತ್ತಿಸಬೇಕಿದೆ. ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗಗಳು ಬರುವ ಮುನ್ನ ಸಮಸ್ಯೆ ಸರಿಪಡಿಸಲು ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಮುಂದಾಗಲಿ.
-ಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ, ಚನ್ನಪಟ್ಟಣ
ಕಸ ವಿಲೇವಾರಿ ಸ್ಥಳದ ವಿವಾದ ಇರುವುದರಿಂದ ಸಮಸ್ಯೆ ಇದೆ. ಖಾಸಗಿ ಸ್ಥಳದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಪಟ್ಟಣದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
-ಪುಟ್ಟಸ್ವಾಮಿ, ಪೌರಾಯುಕ್ತ
* ಎಂ.ಶಿವಮಾದು