ರಾಯಚೂರು: ಕಾಂಗ್ರೆಸ್‌ಗೆ ಒಬ್ಬ ಸಮರ್ಥ ಅಧ್ಯಕ್ಷ ಸಿಗುತ್ತಿಲ್ಲ. ಹಾಳೂರಿಗೆ ಉಳಿದವನೇ ಗೌಡ ಎನ್ನುವಂತಾಗಿದೆ ಮಲ್ಲಿಕಾರ್ಜುನ ಖರ್ಗೆ ಪರಿಸ್ಥಿತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್‌ನವರು ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿಕೊಳ್ಳಲಿ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೂ ಎಳಸು. ಅದಕ್ಕೆ ಕಾಂಗ್ರೆಸ್ ಬಿಟ್ಟು ಕೆಸಿಆರ್, ಲಾಲೂ, ನಿತೀಶ್ ಕುಮಾರ್ ಸೇರಿಕೊಂಡು 2024ಕ್ಕೆ ಹೊಸ ಯೋಜನೆ ರೂಪಿಸುತ್ತಿದ್ದಾರೆ.
ಇಷ್ಟು ದಿನ ಜೆಡಿಎಸ್ ಬಿ ಟೀಂ ಎನ್ನುತ್ತಿದ್ದರು. ಈವಾಗ ಅವರೇ ಬಿ ಟೀಂ ಆಗಿದ್ದಾರೆ ಎಂದರು. ಬಿಜೆಪಿಯವರು ಪಿಎಫ್‌ಐ ಸಂಘಟನೆಗೆ ಐದು ವರ್ಷಕ್ಕೆ ಡಿವೋರ್ಸ್ ಕೊಟ್ಟಿದ್ದಾರೆ. ಐದು ವರ್ಷ ಆದ ಮೇಲೆ ಏನು ಮಾಡುತ್ತಾರೆ? ಪಿಎಫ್‌ಐ ವಿರುದ್ಧ ಆರೋಪಗಳಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಆರೋಪ ಸಾಬೀತಾದರೆ ಗಲ್ಲಿಗೇರಿಸಲಿ. ಆದರೆ, ಬ್ಯಾನ್ ಮಾಡಲು ಕಾರಣ ಬೇಕಿದೆ. ಅದನ್ನು ಮೊದಲು ತಿಳಿಸಲಿ.
ಬಿಜೆಪಿಯವರಿಗೆ ಅಧಿಕಾರದ ಮದವೇರಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ನಾವು ಆ ಎರಡೂ ಪಕ್ಷಗಳಿಗಿಂತ ವಿಭಿನ್ನವಾಗಿ ಹೋಗುತ್ತೇವೆ. ಪಂಚರತ್ನ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಭಯ ಮುಕ್ತ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಮಾಡಿದ್ದೇವೆ. ನಾವು ಕೆಲಸ ಮಾಡದಿದ್ದಲ್ಲಿ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದರು.