ಬೆಂಗಳೂರು: ಗೋಹತ್ಯೆ ನಿಷೇಧ ವಿಧೇಯಕ ವಿಧಾನಪರಿಷತ್ ನಲ್ಲಿ ಅಂಗೀಕಾರ ಮಾಡಿದ ರೀತಿಗೆ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅಸಮಾಧಾನಗೊಂಡಿದ್ದು, ವಿಧೇಯಕವನ್ನು ಮತ್ತೊಮ್ಮೆ ಮತಕ್ಕೆ ಹಾಕಿ ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಇತಿಹಾಸದಲ್ಲಿ ಇಂತಹ ಸರ್ಕಾರ ಇರಲಿಲ್ಲ. ಸದನದಲ್ಲಿ ನಿಯಮ ನಡವಳಿಕೆ ಇಲ್ಲ. ಉಪಸಭಾಪತಿ ಏಕಾಏಕಿ ಬಿಲ್ ಪಾಸ್ ಮಾಡಿದ್ದಾರೆ. ವಿಧೇಯಕ ಮತಕ್ಕೆ ಹಾಕಿದರೆ ಸೋಲಾಗುತ್ತಿತ್ತು ಎಂದರು.
ಇದನ್ನೂ ಓದಿ:ಬಂಟ್ವಾಳ: ತಾಯಿಯ ಕುರಿತು ಭಾವನಾತ್ಮಕ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ!
ವಿಧೇಯಕ ಮಂಡನೆ ಸಂದರ್ಭದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿಗಳು ರಿಮೋಟ್ ಕಂಟ್ರೋಲ್ ನಲ್ಲಿ ಸದನ ನಡೆಸಿದ್ದಾರೆ. ನಮ್ಮನ್ನು ಹೊಡೆಯುವುದೊಂದು ಬಾಕಿ ಇತ್ತು, ಇನ್ನೂ ನಾಲ್ಕು ಜನ ಹೆಚ್ಚಾದರೆ ನಮ್ಮನ್ನು ಹೊಡೆದು ಹೊರಗೆ ಹಾಕ್ತಿದ್ದರು, ಮಾನ ಮರ್ಯಾದೆ ಏನೂ ಇಲ್ಲ ಇವರಿಗೆ ಎಂದು ಇಬ್ರಾಹಿಂ ಕಿಡಿಕಾರಿದರು.
ಸರ್ಕಾರದ ಈ ನಡೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ, ಅಗತ್ಯ ಇದ್ದರೆ ಬೀದಿ ಹೋರಾಟ ಮಾಡುತ್ತೇವೆ. ಹೀಗೆ ಮಾಡುತ್ತಾ ಹೋದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಅವರು ಹೇಳಿದರು.