ಬೆಂಗಳೂರು : ‘4 ವರ್ಷಗಳಿಂದ ಎಲ್ಲಿ ಮಲಗಿದ್ದೆ? ಈಗ ಹಸಿರು ಶಾಲು ಹಾಕಿಕೊಂಡು ಹೋರಾಟ ಮಾಡುತ್ತೀಯಾ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮಹಿಳೆಯ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಕಬ್ಬಿನ ಬಾಕಿ ಹಣ ನೀಡಲು ಆಗ್ರಹಿಸಿ ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ವೇಳೆಯಲ್ಲಿ ಸಿಎಂ ಎಚ್‌ಡಿಕೆ ಕೆಂಡಾಮಂಡಲವಾಗಿದ್ದಾರೆ.
ಭಾನುವಾರ ಬೆಂಗಳೂರಿನ ಕೃಷಿ ಮೇಳದಲ್ಲಿ ಮಾತನಾಡಿದ ಅದ್ಯಾವುದೋ ಮಹಿಳೆ ಪ್ರತಿಭಟನೆ ಮಾಡುತ್ತಾಳೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಅನರ್ಹ ಅನ್ನುತ್ತಾಳೆ.ಅವರು ಹೊಲದಲ್ಲಿ ಕೆಲಸ ಮಾಡಿದ್ದಾಳಾ ಇಲ್ಲ ಗೊತ್ತಿಲ್ಲ. ಅವಳಿಕೆ 4 ವರ್ಷದಿಂದ ಕಬ್ಬಿನ ಹಣ ಕೊಡಲು ಬಾಕಿ ಇದೆಯಂತೆ. ಬಾಕಿ ಕೊಡಲು ಇದ್ದವರಿಗೆ ಮತ ಹಾಕಿ ಈಗ ಕುಮಾರಸ್ವಾಮಿ ನೆನಪಾಗಿದ್ದಾರಾ, ಇಷ್ಟು ದಿನ ಎಲ್ಲಿ ಮಲಗಿದ್ದಿ ? ಈಗ ಹಸಿರು ಶಾಲು ಹಾಕಿ ಈಗ ಹೋರಾಟ ಮಾಡ್ತೀಯಾ? ಮತ ಹಾಕುವಾಗ ನಾನು ನೆನಪಾಗಲಿಲ್ಲ ಅಲ್ಲ’ ಎಂದಿದ್ದಾರೆ.
ನಾನು ಹಳ್ಳಿಗೆ ಹೋದರೆ ಚಪ್ಪಲಿಯನ್ನು ನೂರು ಮೀಟರ್ ದೂರದಲ್ಲಿ ಬಿಟ್ಟು ಬರಿಗಾಲಲ್ಲಿ ಬಂದು ನಮಸ್ಕರಿಸುವ ಔದಾರ್ಯ ತೋರುವ ರೈತ ಹೀಗೆ ಮಾಡುತ್ತಾನಾ ಎಂದು ಕಿಡಿ ಕಾರಿದರು.
ಸುವರ್ಣ ಸೌಧದ ಬೀಗ ಒಡೆದವರು ರೈತರಲ್ಲ. ಅವರು ದರೋಡೆಕೋರರು , ಇವತ್ತು ಬೀಗ ಒಡೆದಿದ್ದಾರೆ. ಧರಣಿ ಕುಳಿತ 20-30 ಜನಕ್ಕೆ ನಾನು ಹೆದರುವುದಿಲ್ಲ. ನನ್ನ ತಾಳ್ಮೆಗೂ ಇತಿ ಮಿತಿ ಇದೆ.ಬಾಯಿ ಚಪಲ ಇದ್ದವರು ಮಾತನಾಡಲಿ ಎಂದು ಕಿಡಿ ಕಾರಿದರು.
ಮಾಧ್ಯಮಗಳ ಮೇಲೆ ಕಿಡಿ
ಮಾಧ್ಯಮಗಳ ಮೇಲೂ ಕಿಡಿ ಕಾರಿದ ಸಿಎಂ ನಿಮಗಾಗಿ ಅವರನ್ನು ಲಾರಿ ಕೆಳಗೆ ಮಲಗಿಸಿ ಸುದ್ದಿ ಮಾಡುತ್ತೀರಾ,ಕೆಲ ಮಾಧ್ಯಮಗಳು ನನ್ನ ಸರ್ಕಾರ ಬೀಳಿಸಲು ಕಾಯುತ್ತಿವೆ.ಇದಕ್ಕೆಲ್ಲಾ ನಾನು ಬಗ್ಗಲ್ಲ ಎಂದು ಕೆಂಡಾಮಂಡಲವಾಗಿದ್ದಾರೆ.
ರೈತರು ಹೋರಾಟ ತೀವ್ರ ಗೊಳಿಸಿದ್ದು, ಮಹಿಳೆಯರು ಬೀದಿಗಿಳಿದು ಮುಖ್ಯಮಂತ್ರಿ ವಿರುದ್ಧ ಕಟು ಶಬ್ಧಗಳಿಂದ ತೀವ್ರ ಆಕ್ರೋಶ ಹೊರ ಹಾಕಿದ್ದರು. ಈ ವಿಚಾರ ಸಿಎಂ ಎಚ್‌ಡಿಕೆ ಅವರನ್ನು ಕೆರಳಿಸಿದೆ ಎನ್ನಲಾಗಿದೆ.
ರೈತರು ಜಿಲ್ಲಾಧ್ಯಂತ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಉಗ್ರ ಸ್ವರೂಪಕ್ಕೆ ತಿರುಗಿದ್ದು , ಸುವರ್ಣ ಸೌಧದ ಆವರಣಕ್ಕೆ ಕಬ್ಬು ತುಂಬಿದ್ದ ಲಾರಿಗಳನ್ನು ನುಗ್ಗಿಸಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರೈತರ ಬಂಧನದಿಂದ ಇದೀಗ ಹೋರಾಟ ನಿರತರ ಆಕ್ರೋಶ ಇನ್ನೂ ಹೆಚ್ಚಾಗಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.