Advertisement

ಸದ್ಯಕ್ಕಿಲ್ಲ “ಕುಮಾರ ಸಂಪುಟ’ವಿಸ್ತರಣೆ

06:00 AM May 28, 2018 | Team Udayavani |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕುತೂಹಲ ದಿನಕಳೆದಂತೆ ತೀವ್ರಗೊಳ್ಳುತ್ತಿದೆ. ಖಾತೆ ಹಂಚಿಕೆ ಇನ್ನೂ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆಗೆ ಬ್ರೇಕ್‌ ಬಿದ್ದಿದೆ.

Advertisement

ಪ್ರಮುಖ ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಧ್ಯೆ ಗೊಂದಲ ಮುಂದುವರಿದಿದೆ. ಹೀಗಾಗಿ ಯಾರು ಸಚಿವರಾಗಬೇಕು ಎಂಬ ಬಗ್ಗೆ ಜೆಡಿಎಸ್‌ನಲ್ಲಿ ಪಟ್ಟಿ ಬಹುತೇಕ ಸಿದ್ಧವಾಗಿದ್ದರೂ, ಕಾಂಗ್ರೆಸ್‌ನಲ್ಲಿ ಮಾತ್ರ ಇನ್ನೂ ಪಟ್ಟಿ ಅಂತಿಮಗೊಂಡಿಲ್ಲ. ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಶನಿವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದು, ಭಾನುವಾರ ಮತ್ತೂಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದರು. ಆದರೆ, ರಾಹುಲ್‌ ಭಾನುವಾರ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಕಾಂಗ್ರೆಸ್‌ ನಾಯಕರು ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ.

ಎರಡೂ ಪಕ್ಷಗಳ ಮಧ್ಯೆ ಎಷ್ಟು ಸಚಿವರಿರಬೇಕು ಎಂಬುದು ನಿರ್ಧಾರವಾಗಿದೆಯಾದರೂ ಖಾತೆಗಳ ಹಂಚಿಕೆ ಮಾತ್ರ ತೀರ್ಮಾನವಾಗಿಲ್ಲ. ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರಿಗೆ ರಾಹುಲ್‌ ಗಾಂಧಿ ಸೂಚಿಸಿರುವುದಾಗಿ ತಿಳಿದು ಬಂದಿದೆ. ಪ್ರಮುಖವಾಗಿ ಹಣಕಾಸು, ಲೋಕೋಪಯೋಗಿ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಮುಂತಾದ ಪ್ರಮುಖ ಖಾತೆಗಳ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ.

ಹಣಕಾಸು ಖಾತೆಗೆ ಕೈ ಪಟ್ಟು:
ಹಣಕಾಸು ಖಾತೆ ನೀಡುವಂತೆ ಕಾಂಗ್ರೆಸ್‌ ಪಟ್ಟು ಹಿಡಿದಿದೆ ಎನ್ನಲಾಗಿದೆ. ಇತ್ತ, ಮುಖ್ಯಮಂತ್ರಿ ಕುಮಾರಸ್ವಾಮಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಗೃಹ, ಲೋಕೋಪಯೋಗಿ, ಇಂಧನ, ಜಲ ಸಂಪನ್ಮೂಲ, ಕಂದಾಯದಂತಹ ಖಾತೆಗಳನ್ನು ಯಾರಿಗೆ ನೀಡಬೇಕು ಎಂಬ ಕುರಿತು ಎರಡೂ ಪಕ್ಷಗಳ ನಾಯಕರ ನಡುವೆ ಸ್ಪಷ್ಟ ನಿರ್ಧಾರವಾಗಿಲ್ಲ.

ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಕಾಂಗ್ರೆಸ್‌ ಪಟ್ಟುಹಿಡಿದಿದೆ. ಆದರೆ, ಜೆಡಿಎಸ್‌ ಕೂಡ ಲೋಕೋಪಯೋಗಿ, ಹಣಕಾಸು, ಕಂದಾಯ ಇಲಾಖೆಗಳನ್ನು ತನ್ನ ಬಳಿ ಇಟ್ಟುಕೊಳ್ಳಲು ಮುಂದಾಗಿದೆ. ಈ ಕುರಿತಂತೆ ಗುಲಾಂನಬಿ ಆಜಾದ್‌ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಸೋಮವಾರ ಚರ್ಚಿಸಿ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.

Advertisement

ದೆಹಲಿಯಲ್ಲಿ ಮೊಕ್ಕಾಂ:
ಈ ನಡುವೆ ಎಚ್‌.ಕೆ.ಪಾಟೀಲ್‌, ಆರ್‌.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್‌, ರಾಜಶೇಖರ್‌ ಪಾಟೀಲ್‌, ಬಿ.ಸಿ.ಪಾಟೀಲ್‌, ಅಮರೇಗೌಡ ಬಯ್ನಾಪುರ ಸೇರಿ ಇಪ್ಪತ್ತಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳು ದೆಹಲಿಯಲ್ಲಿಯೇ ಬೀಡು ಬಿಟ್ಟು, ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ. ಆದರೆ, ಜೆಡಿಎಸ್‌ ಹೆಚ್ಚು ಸ್ಥಾನ ಗೆದ್ದಿರುವ ಜಿಲ್ಲೆಗಳಲ್ಲಿ ಪ್ರಮುಖರಿಗೆ ಅವಕಾಶ ನೀಡದೇ ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂದು ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ. ಅಲ್ಲದೆ, ಜಾತಿ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ಸಚಿವರ ಆಯ್ಕೆ ಮಾಡಲು ಕಾಂಗ್ರೆಸ್‌ ನಿರ್ಧರಿಸಿರುವುದರಿಂದ ಕೆಲವು ಹಿರಿಯ ಸಚಿವರಿಗೆ ಸಂಪುಟ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎಚ್‌ಡಿಕೆ ಇಂದು ಪಿಎಂ ಭೇಟಿ:
ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿರುವುದರಿಂದ ಇದೇ ಸಂದರ್ಭದಲ್ಲಿ ಗುಲಾಮ್‌ ನಬಿ ಆಜಾದ್‌ ಅವರನ್ನು ಭೇಟಿ ಮಾಡಿ ಖಾತೆ ಹಂಚಿಕೆ ಕುರಿತಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿಯೇ ರಾಜ್ಯ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದಾರೆ. ಸೋಮವಾರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ವಾಪಸಾದ ನಂತವೇ ವಿಸ್ತರಣೆ?:
ಈ ಮಧ್ಯೆ ಎರಡೂ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆದು ಗುಲಾಂ ನಬಿ ಆಜಾದ್‌ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಂಡರೂ ಕೆಲವು ಪ್ರಭಾವಿ ಮುಖಂಡರು ಅದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ ರಾಹುಲ್‌ ಗಾಂಧಿ ವಿದೇಶ ಪ್ರವಾಸದಿಂದ ವಾಪಸ್‌ ಬಂದ ಬಳಿಕವೇ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ಹಿಂದೆ ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಬಹುತೇಕ ಸೋಮವಾರ ಈ ಕೆಲಸ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಂಗ್ರೆಸ್‌ ನಾಯಕರ ಭೇಟಿ ಬಗ್ಗೆ ಪ್ರಸ್ತಾಪವಿಲ್ಲ. ಅಲ್ಲದೆ, ಪ್ರಧಾನಿ ಮತ್ತು ಕಲ್ಲಿದ್ದಲು ಸಚಿವರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸಾಗುತ್ತಿರುವುದರಿಂದ ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್‌ ಮುಖಂಡರ ಜತೆ ಸಭೆ ನಡೆಯುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನವರು ಹಣಕಾಸು ಖಾತೆ ಕೇಳುತ್ತಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆ ಕೇಳುವುದು ಸಹಜ. ಆದರೆ, ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಇನ್ನೂ ಈ ಬಗ್ಗೆ ತೀರ್ಮಾನ ಅಗಬೇಕಿದೆ. ಈ ಬಗ್ಗೆ ಚರ್ಚಿಸಲು ರಾಹುಲ್‌ ಗಾಂಧಿ ಆಹ್ವಾನ ನೀಡಿಲ್ಲ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿರುವುದರಿಂದ ಅವರೊಂದಿಗಿನ ಭಾನುವಾರದ ಸಭೆ ರದ್ದಾಗಿದೆ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಅಗತ್ಯ ಬಿದ್ದರೆ ನಾನೂ ಕೂಡ ಕುಮಾರಸ್ವಾಮಿ ಜತೆ ಚರ್ಚಿಸುತ್ತೇನೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next