Advertisement

ಬಿಜೆಪಿ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಸಿಎಂ

11:59 AM Oct 10, 2017 | Team Udayavani |

ಹುಬ್ಬಳ್ಳಿ: ವಿಪಕ್ಷದವರನ್ನು ಬಲಹೀನಗೊಳಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ರಾಜಕೀಯ ದ್ವೇಷ ಸಾಧಿಸಲು ಮುಂದಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಆರೋಪಿಸಿದರು. 

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ  ಈ ವಿಷಯ ತಿಳಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಕಪ್ಪು ಹಣ ಕುರಿತ ಸಂಭಾಷಣೆಯುಳ್ಳ ಸಿಡಿ ಅಸಲಿಯಾಗಿದೆ ಎಂದು ಎಫ್‌ಎಸ್‌ಎಲ್‌ ವರದಿ ನೀಡಿರುವುದರ ಹಿಂದೆ ಸರಕಾರದ ಷಡ್ಯಂತ್ರ ಅಡಗಿದೆ.

ಸಿದ್ದರಾಮಯ್ಯ ಕುತಂತ್ರ, ಕುಹಕ ಬುದ್ಧಿಯಿಂದ ರಾಜಕೀಯ ಪ್ರೇರಿತವಾಗಿ ಅವರ ಮೇಲೆ ಎಸಿಬಿ ಮೂಲಕ ಹಣಿಯಲು ಮುಂದಾಗಿದ್ದು, ಇದು ಅಧಿಕಾರದ ದುರುಪಯೋಗ ಆಗಿದೆ ಎಂದರು. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸದೆ, ಎಫ್‌ಎಸ್‌ಎಲ್‌ ವಿಭಾಗದ ವರದಿಗಿಂತಲೂ ಮೊದಲೇ ಅದಕ್ಕೆ ಕ್ಲೀನ್‌ ಚಿಟ್‌ ನೀಡಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಅದು ಸೈಬರ್‌ ಕ್ರೈಂ ವಿಭಾಗದವರ ಬದಲು ಭೌತಶಾಸ್ತ್ರ ವಿಭಾಗದವರು ತನಿಖೆ ನಡೆಸಿದ್ದಾರೆ. ಅಲ್ಲದೇ ಅಕ್ಟೋಬರ್‌ 4 ರಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ ನೀಡುತ್ತಾರೆ. ಈ ಸಮಯದಲ್ಲಿ ದಸರಾ ಹಬ್ಬದ ರಜಾ ದಿನಗಳು ಬಂದರೂ ಸಹಿತ 15 ದಿನದೊಳಗೆ ವರದಿ ಸಿದ್ಧಪಡಿಸಿದ್ದಾರೆ.

ಇಷ್ಟು ಬೇಗ ವರದಿ ತರಿಸಿಕೊಳ್ಳಲು ಹೇಗೆ ಸಾಧ್ಯ. ಈ ವರದಿಯೇ ಸಂಶಯಾಸ್ಪದವಾಗಿದ್ದು, ಇದನ್ನು ಪಕ್ಷದ ಕಾನೂನು ವಿಭಾಗ ಪ್ರಶ್ನಿಸಲಿದೆ ಎಂದರು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದ ಸಚಿವರಾದ ಬಸವರಾಜ ರಾಯರೆಡ್ಡಿ, ರಮೇಶಕುಮಾರ ಹಾಗೂ ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ ವಿರುದ್ಧ ಪಕ್ಷದಿಂದ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

Advertisement

ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಯಡಿಯೂರಪ್ಪ ಹಾಗೂ ಅನಂತಕುಮಾರ ಕಪ್ಪು ಹಣ ಬಗ್ಗೆ ಮಾತನಾಡಿದ್ದಾರೆಂಬ ಸಿಡಿ ಬಗ್ಗೆ ಕಾಂಗ್ರೆಸ್‌ನ ಕಾನೂನು ಸಲಹೆಗಾರ ಧನಂಜಯ ಎಸಿಬಿಗೆ ದೂರು ನೀಡಿದ್ದಾರೆ ಎಂಬ ಆಧಾರ ಮೇಲೆ ಅವರಿಬ್ಬರ ಮೇಲೆ ದೂರು ದಾಖಲಿಸಲು ಮುಂದಾಗಿದ್ದಾರೆ.

ಎಸಿಬಿಯಲ್ಲಿ ಸಿದ್ದರಾಮಯ್ಯ ಮೇಲೆ 18 ಹಾಗೂ ಅವರ ಕುಟುಂಬದವರ ಮೇಲೆ ಸುಮಾರು 28 ದೂರುಗಳು ದಾಖಲಾಗಿವೆ. ಅದರ ಬಗ್ಗೆ ತನಿಖೆ ನಡೆಯುತ್ತಿಲ್ಲ. ಯಡಿಯೂರಪ್ಪ ಅವರನ್ನು ಹೇಗಾದರೂ ಮಾಡಿ ಬಂಧಿಸಲೇಬೇಕೆಂಬ ದುರುದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದಾರೆ.

ಹೀಗಾಗಿ ತಮ್ಮ ವಿರೋಧಿಗಳ ಮೇಲೆ ಇನ್ನಿಲ್ಲದ ಷಡ್ಯಂತ್ರ-ಕುತಂತ್ರ ನಡೆಸಿರುವುದು ತೀವ್ರ ಖಂಡನೀಯ. ಸಿಡಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸೂಪರ್‌ ಸಿಎಂ ಕೆಂಪಯ್ಯ, ಎಂ.ಎನ್‌. ರೆಡ್ಡಿ, ಸಿಎಂ ಕಾರ್ಯದರ್ಶಿ ಅಥಿಕ್‌ ನೇರ ಕೈವಾಡವಿದೆ ಎಂದು ಆರೋಪಿಸಿದರು.

ಅರ್ಕಾವತಿ ಕ್ಲೀನ್‌ ಚಿಟ್‌ ಬಹಿರಂಗಕ್ಕೆ ಸವಾಲು: ವಿಧಾನಸಭೆಯಲ್ಲಿ ಅರ್ಕಾವತಿ ಪ್ರಕರಣ ಹೊರ ಹಾಕಿದಾಗ ನನ್ನ ಮೇಲೆಯೂ ಸಿದ್ದರಾಮಯ್ಯ ಸುಳ್ಳು ಪ್ರಕರಣ ಹಾಕಿಸಿದ್ದರು. ಅವರ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ.

ಅರ್ಕಾವತಿ ಹಗರಣದಲ್ಲಿ ಅವರಿಗೆ ಕ್ಲೀನ್‌ ಚಿಟ್‌ ಆಗಿದ್ದರೆ ಅದನ್ನು ಕೂಡಲೇ ಬಹಿರಂಗಪಡಿಸಲಿ ನೋಡೋಣವೆಂದು ಸವಾಲು ಹಾಕಿದರು. ಅಲ್ಲದೆ ಗೋವಿಂದ ರಾಜು ಡೈರಿ ಪ್ರಕರಣವನ್ನು ಐಟಿ ಇಲಾಖೆಯು ತನಿಖೆ ನಡೆಸುತ್ತಿದೆ. ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಟ್ಟ ಕುರಿತ ಸಂಭಾಷಣೆಯುಳ್ಳ ಸಿಡಿಯ ಕುರಿತು ಸಂಪೂರ್ಣ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು. 

ನ.2ರಿಂದ ರಾಜ್ಯಾದ್ಯಂತ ಪರಿವರ್ತನಾ ರ್ಯಾಲಿ: ರಾಜ್ಯ ಸರಕಾರದ ವೈಫಲ್ಯ, ದ್ವೇಷದ ರಾಜಕಾರಣ ಕುರಿತು ಹಾಗೂ ಹಿಂದಿನ ಬಿಜೆಪಿ ಮತ್ತು ಇಂದಿನ ಕೇಂದ್ರ ಸರಕಾರದ ಸಾಧನೆಗಳ ಕುರಿತು ಜನರಿಗೆ ತಲುಪಿಸಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸಲು ಪಕ್ಷದಿಂದ ಪರಿವರ್ತನಾ ರ್ಯಾಲಿಯನ್ನು ನವೆಂಬರ್‌ 2ರಿಂದ ಬೆಂಗಳೂರಿನಿಂದ ಆರಂಭಿಸಲಾಗುವುದು.

ಈ ರ್ಯಾಲಿಯು ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್‌ನಲ್ಲಿ ಎರಡನೇ ಹಂತದ ರ್ಯಾಲಿ ಹುಬ್ಬಳ್ಳಿಯಿಂದ ಆರಂಭವಾಗಲಿದೆ ಎಂದರು. ಮಹಾಪೌರ ಡಿ.ಕೆ. ಚವ್ಹಾಣ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಮಹೇಶ ಬುರ್ಲಿ, ಭೀರಪ್ಪ ಖಂಡೇಕರ ಮೊದಲಾದವರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next