ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ವಿಫಲರಾದ ನಗರ ಪೊಲೀಸರ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರನ್ನು ಈ ಬಗ್ಗೆ ಪ್ರಶ್ನಿಸಿ, ತರಾಟೆ ತೆಗೆದುಕೊಂಡರು.
ಅಲ್ಲದೆ, ತಮ್ಮ ಪ್ರಮಾಣ ವಚನ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲುಕ್ಯ ವೃತ್ತದಿಂದ ವಿಧಾನಸೌಧ ಆವರಣಕ್ಕೆ ನಡೆದು ಬರಲು ಸಂಚಾರ ದಟ್ಟಣೆಯೇ ಕಾರಣ. ಈ ಕುರಿತು ಏನೇಲ್ಲ ಕ್ರಮಕೈಗೊಂಡಿದ್ದಿರಿ ಎಂಬ ಬಗ್ಗೆ ಉತ್ತರಿಸುವಂತೆ ಸೂಚಿಸಿದರು. ಈ ವೇಳೆ ಇಬ್ಬರು ಅಧಿಕಾರಿಗಳು ಒಂದು ಕ್ಷಣ ಮೌನವಾದರು.
ಬಳಿಕ ನಗರದಲ್ಲಿ ಯಾವ ಯಾವ ಸ್ಥಳಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಇದೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಹೆಚ್ಚು ಸಿಬ್ಬಂದಿ ನಿಯೋಜಿಸಿ ಎಂದು ಸಲಹೆ ನೀಡಿದರು. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇಲ್ಲಿಯ ಸಂಚಾರ ದಟ್ಟಣೆಯಿಂದ ಕೆಲವರು ನಗರವನ್ನೇ ಬಿಟ್ಟು ಹೋಗುತ್ತಿದ್ದಾರೆ.
ಇದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಜತೆಗೆ ದೇಶ-ವಿದೇಶಗಳಿಂದ ಬರುವ ಜನರು ನೆಮ್ಮದಿಯಿಂದ ಜೀವನ ನಡೆಸಬೇಕು. ಅವರಿಗೆ ಓಡಾಡಲು ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕಾದ ಹೊಣೆ ಸರ್ಕಾರದ ಮೇಲಿದೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ವಸೂಲಿ ನಿಲ್ಲಿಸಿ: ಇದೇ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಬಾರ್ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಮಂಥ್ಲಿ(ಮಾಮೂಲಿ) ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಖಚಿತ ಮಾಹಿತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಹಣ ಕೊಡುವ ವ್ಯಕ್ತಿಗಳ ಜತೆ ಸೇರಿಕೊಂಡು ಅಮಾಯಕ ಜನರ ಮೇಲೆ ದಬ್ಟಾಳಿಕೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ.
ಇನ್ನು ವರ್ಗಾವಣೆಗಾಗಿ ಕೆಲ ಮಧ್ಯವರ್ತಿಗಳನ್ನು ತಮ್ಮ ಛೇಂಬರ್‌ವರೆಗೆ ಕರೆಸಿಕೊಂಡು ಕಷ್ಟ-ಸುಖಾ ಮಾತನಾಡುತ್ತಿರಾ. ಇದಕ್ಕೆಲ್ಲ ಬ್ರೇಕ್ ಹಾಕಬೇಕು. ಇಲ್ಲವಾದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.