Advertisement

ತಿಂಗಳಿಗೊಮ್ಮೆ ಸಿಎಂ , ಡಿಸಿಎಂ ಕಾರ್ಯಕರ್ತರ ಭೇಟಿ: ಡಿ.ಕೆ.ಶಿವಕುಮಾರ್‌

10:06 PM May 27, 2024 | Team Udayavani |

ಬೆಂಗಳೂರು: ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ಕಾರ್ಯಕರ್ತರ ಭೇಟಿ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Advertisement

ಈ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು. ಪಕ್ಷದ ಕಚೇರಿಯಲ್ಲಿ ನಡೆದ ನೆಹರು ಪುಣ್ಯಸ್ಮರಣೆ ವೇಳೆ ಮಾತನಾಡಿದ ಅವರು, ತಿಂಗಳಿಗೊಮ್ಮೆ ಮುಖ್ಯಮಂತ್ರಿ ಹಾಗೂ ನಾನು ಒಂದು ದಿನ ಕಾಂಗ್ರೆಸ್‌ ಕಚೇರಿಯಲ್ಲಿ ಕುಳಿತು ಕಾರ್ಯಕರ್ತರನ್ನು ಭೇಟಿ ಮಾಡುತ್ತೇವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇವಲ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಎಷ್ಟೋ ಬಾರಿ ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಪ್ರಮುಖರನ್ನೇ ಮೊದಲು ಕರೆದು ಮಾತನಾಡಿಸುತ್ತೇವೆ. ಇದರಿಂದ ನಮಗೂ ಮುಜುಗರವಾಗುತ್ತದೆ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಿದವರ ಜತೆ ನಮಗೆ ಮಾತನಾಡಲು ಆಗುವುದಿಲ್ಲ. ಈ ಅನುಭವ ನನಗೂ ಆಗಿದೆ. ಹೀಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಗಳಿಗೆ ಅಡಿಪಾಯ: ಈ ಸರ್ಕಾರ ನಾಲ್ಕು ವರ್ಷದ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ. ಇದಕ್ಕಾಗಿ ನಾವು ಈಗಿನಿಂದಲೇ ತಯಾರಿ ನಡೆಸಬೇಕು. ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಕೃಷ್ಣ ಭೈರೇಗೌಡ ಅವರ ಜತೆ ಚರ್ಚೆ ಮಾಡಿದ್ದೇನೆ. ನಾವು ನಮ್ಮ ದೇವಾಲಯವಾಗಿರುವ ಕಾಂಗ್ರೆಸ್‌ ಕಚೇರಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಕಚೇರಿಗಳ ನಿರ್ಮಾಣಕ್ಕೆ ಮುಂದಿನ ಒಂದು ವರ್ಷದಲ್ಲಿ ಅಡಿಪಾಯ ಹಾಕುತ್ತೇವೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಕೆಲಸ ಆರಂಭವಾಗಿವೆ. ಎಲ್ಲಾ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಇದರ ಹೊಣೆ ಹೊರಬೇಕು. ಇನ್ನು ರೇಸ್‌ ಕೋರ್ಸ್‌ ರಸ್ತೆಯ ಕಚೇರಿಯ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡುತ್ತೇವೆ ಎಂದು ವಿವರಿಸಿದರು.

ಇವಿಎಂ ಹೆಚ್ಚುಕಮ್ಮಿ ಆಗದಿದ್ದರೆ
ಗೆಲುವು ನಮ್ಮದೇ: ಡಿಕೆಶಿ
ನೀವೆಲ್ಲರೂ ಕಷ್ಟಪಟ್ಟು ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರಿ. ಕಾರ್ಯಕರ್ತರು, ಮತದಾರರ ಶ್ರಮದಿಂದ ಸರ್ಕಾರ ಬಂದಿದೆ. ಅದೇ ಶ್ರಮದಿಂದಾಗಿ ಕರ್ನಾಟಕದಲ್ಲೇ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ಈ ಬಾರಿ ಸದ್ಯ ಚರ್ಚೆಯಾಗುತ್ತಿರುವಂತೆ ಚುನಾವಣೆಯಲ್ಲಿ ಇವಿಎಂ ಹೆಚ್ಚು ಕಮ್ಮಿಯಾಗದಿದ್ದರೆ ಜನ ನಮಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ ಎಂಬ ನಂಬಿಕೆ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next