ಬೆಳಗಾವಿ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜೊತೆ ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ. ಇಂತಹ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.
ನಂತರ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವಳಿಕೆ ತಜ್ಞರಾದ ಡಾ.ಮಹಾಂತೇಶ ಶೆಟ್ಟೆಪ್ಪನವರ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಡಾ| ಮಹಾಂತೇಶ ಶೆಟ್ಟೆಪ್ಪನವರ ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಿದೆ. ಅಲ್ಲಿಂದ ಬಂದ ವಲಸಿಗರು ಹಾಗೂ ಸೋಂಕಿತರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಮೂಲಕ ಸೋಂಕಿತರು ಹಾಗೂ ಸಂಪರ್ಕಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಗ್ರಾಮೀಣ ಮಟ್ಟದಲ್ಲಿ ಆಯುಷ್ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಜನರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಇದಲ್ಲದೇ ಟೆಲಿಮೆಡಿಸಿನ್ ಮೂಲಕ ಕೂಡ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಲಕ್ಷಣರಹಿತ ಸೋಂಕಿತರು ಕಂಡುಬಂದಾಗ ಅವರ ಮನೆ ಮನೆಗೆ ತೆರಳಿ ನಿಗದಿತ ಔಷಧೋಪಚಾರ ಒದಗಿಸಲಾಗುತ್ತಿದೆ ಎಂದು ಡಾ.ಶೆಟ್ಟೆಪ್ಪನವರ ಹೇಳಿದರು.
ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ ನಡುವೆ ಯಾವ ರೀತಿ ಸಮನ್ವಯತೆ ಇದೆ ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಡಾ.ಶೆಟ್ಟೆಪ್ಪನವರ, ಸರಕಾರದ ಮಾರ್ಗಸೂಚಿ ಪ್ರಕಾರವೇ ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆ ನಡೆಯುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ ನಡುವೆ ಸಮನ್ವಯತೆ ಕೊರತೆ ಕಂಡುಬಂದಿಲ್ಲ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಆರ್.ಸಿ.ಎಚ್. ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದರಿಂದ ಯಾವುದೇ ತೊಂದರೆಯಾಗಿಲ್ಲ. ಕೆಲ ಸಂದರ್ಭಗಳಲ್ಲಿ ಔಷಧಿಗಳ ಪೂರೈಕೆ ವಿಳಂಬವಾಗಿದ್ದರೂ ಅದರಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಸ್ವತಃ ಕೋವಿಡ್ ಸೋಂಕಿಗೆ ತುತ್ತಾಗಿ ಇತ್ತೀಚೆಗಷ್ಟೇ ಚೇತರಿಸಿಕೊಂಡು ಮರಳಿ ಕರ್ತವ್ಯಕ್ಕೆ ಹಾಜರಾಗಿರುವ ಡಾ.ಮಹಾಂತೇಶ ಶೆಟ್ಟೆಪ್ಪನವರ ಆರೋಗ್ಯವನ್ನು ಮುಖ್ಯಮಂತ್ರಿಗಳು ಈಗ ಆರೋಗ್ಯ ಹೇಗಿದೆ ಎಂದು ವಿಚಾರಿಸಿದರು. 20 ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಅದರಿಂದ ಚೇತರಿಸಿಕೊಂಡು ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಡಾ.ಶೆಟ್ಟೆಪ್ಪನವರ ಉತ್ತರಿಸಿದರು. ಬೆಳಗಾವಿ, ಬೆಂಗಳೂರು, ಬಳ್ಳಾರಿ, ಕಲಬುರಗಿ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ 11 ಜಿಲ್ಲೆಗಳ ಕೋವಿಡ್ ಕರ್ತವ್ಯ ನಿರತ ವೈದ್ಯರ ಜೊತೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದರು.