Advertisement

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

11:49 PM Apr 23, 2024 | Team Udayavani |

ಬೆಂಗಳೂರು: ಬರ ಪರಿಹಾರ ವಿಚಾರದಲ್ಲಿ ನಮ್ಮಿಂದ ಜಯ ಸಿಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರು ಅಪಪ್ರಚಾರ ನಡೆಸುತ್ತಿದ್ದು ಬರ ಪರಿಹಾರ ನೀಡಲು ಚುನಾವಣಾ ಆಯೋಗಕ್ಕೆ ಕೇಂದ್ರ ಸರಕಾರ ಮಾಡಿದ ಮನವಿಯ ಫ‌ಲವಾಗಿ ರಾಜ್ಯಕ್ಕೆ ನೆರವು ಸಿಕ್ಕಿದೆ. ಇದೇ ವಿಚಾರವನ್ನು ನ್ಯಾಯಾಲಯಕ್ಕೂ ತಿಳಿಸಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ನಾಯಕ ಆರ್‌.ಅಶೋಕ್‌ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಬರ ಪರಿಹಾರ ಧನ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡುವಂತೆ ಚುನಾವಣ ಆಯೋಗಕ್ಕೆ ಪತ್ರ ಬರೆದಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಲವು ಬಾರಿ ಈ ವಿಚಾರ ಸ್ಪಷ್ಟಪಡಿಸಿದ್ದರು. ಕೇಂದ್ರದ ಅಟಾರ್ನಿ ಜನರಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲೂ ಇದೇ ವಾದ ಮಂಡಿಸಿದ್ದರು. ಇಷ್ಟಾದ ಮೇಲೆ ಕಾಂಗ್ರೆಸ್‌ ನಾಯಕರು ಜಯ ಸಿಕ್ಕಿದೆ ಎಂದು ಯಾವ ಪುರುಷಾರ್ಥಕ್ಕೆ ವಾದಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ನೀಡಿದ ಪ್ರಮಾಣಪತ್ರವನ್ನು ಕಾಂಗ್ರೆಸ್‌ ಪರ ವಕೀಲ ಕಪಿಲ್‌ ಸಿಬಲ್‌ ಕೂಡ ಒಪ್ಪಿಕೊಂಡಿದ್ದಾರೆ. ಅವರು ಯಾವುದೇ ವಾದ ನಡೆಸಿಲ್ಲ. ಹಾಗಿದ್ದ ಮೇಲೆ ಸಿಎಂ ವಿಧಾನಸೌಧದ ಮುಂದೆ ಯಾಕೆ ಪ್ರತಿಭಟನೆ ನಡೆಸಬೇಕು? ಅವರ ಉದ್ದೇಶವಾದರೂ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಯಿಗೆ ಪ್ಲಾಸ್ಟರ್‌ ಅಂಟಿಸಿಕೊಂಡಿದ್ದರಾ?
ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಜೇìವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ? ಇಲ್ಲಿ ಬಾಂಬ್‌ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ನೈತಿಕ ಅಧಿಕಾರ ಇದೆ? ಖರ್ಗೆಯವರು ರಾಜ್ಯಸಭೆಯಲ್ಲಿ ಈ ವಿಚಾರವನ್ನು ಪ್ರಶ್ನಿಸದೆ ಬಾಯಿಗೆ ಪ್ಲಾಸ್ಟರ್‌ ಅಂಟಿಸಿಕೊಂಡಿದ್ದರಾ? ಕೇಂದ್ರ ಸರಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರಕಾರದಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್ ನಿಧಿಗೆ ಕೇಂದ್ರ ತನ್ನ ಪಾಲಾದ 700 ಕೋಟಿ ರೂ. ಮೊದಲೇ ನೀಡಿದೆ. ಹೀಗಿದ್ದ ಮೇಲೆ ರಾಜ್ಯ ಸರಕಾರವೇ ಹಣ ನೀಡಿದೆ ಎಂದು ಸಿದ್ದರಾಮಯ್ಯನವರು ಹೇಳುವುದು ಸುಳ್ಳಲ್ಲವೇ? ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆಗೆ ವಹಿಸಿ
ಕಾಂಗ್ರೆಸ್‌ ಸರಕಾರ ಪಾಪರ್‌ ಆಗಿ ಬೀದಿಗೆ ಬಂದಿದ್ದು, ಮುಂದೆ ಸಂಬಳ ಕೊಡಲು ಹಣ ಇರುವುದಿಲ್ಲ. ಕಾಂಗ್ರೆಸ್‌ ವಿರುದ್ಧ ಹಿಂದೂಗಳು ಕೆರಳುತ್ತಿದ್ದಾರೆ. ಹಿಂದೂಗಳ ರಕ್ತವನ್ನು ಮತಾಂಧರು ಹರಿಸುತ್ತಿದ್ದು ಇದನ್ನು ಮರೆಮಾಚಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಲವ್‌ ಜೆಹಾದ್‌ ಹೇಳಿದ್ದಾರೆ. ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ಮಾಡಲು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌, ವಿಧಾನ ಪರಿಷತ್ತಿನ ಜೆಡಿಎಸ್‌ ಮಾಜಿ ಸದಸ್ಯ ರಮೇಶ್‌ ಗೌಡ, ಮಾಜಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next