ಬೆಂಗಳೂರು: ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿಯಾದರೆ ಮುಸ್ಲಿಮರಿಗೆ ಮತ್ತೆ ಶೇ.4ರ ಮೀಸಲಾತಿ ನೀಡುತ್ತೇನೆ. ಜತೆಗೆ ರಾಜ್ಯದಲ್ಲಿ ಅಮುಲ್ ಹಾಲು ಖರೀದಿಸದಂತೆ ಆದೇಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರಕಾರ ಮುಸ್ಲಿಮರ ಶೇ.4 ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿದೆ. ಈ ಹಂಚಿಕೆ ಲಿಂಗಾಯತರು ಮತ್ತು ಒಕ್ಕಲಿಗರ ಬೇಡಿಕೆಯಾಗಿತ್ತಾ? ನಾನು ಮುಖ್ಯಮಂತ್ರಿಯಾದರೆ ಮುಸ್ಲಿಮರ ಮೀಸಲಾತಿಯನ್ನು ವಾಪಸ್ ತರುತ್ತೇನೆ. ಮಾತ್ರವಲ್ಲದೆ, ಒಕ್ಕಲಿಗರು ಹಾಗೂ ಲಿಂಗಾಯತರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಇದೇ ವೇಳೆ ಗುಜರಾತ್‌ನ ಅಮುಲ್ ಹಾಗೂ ಕರ್ನಾಟಕದ ನಂದಿನಿ ವಿವಾದದ ಬಗ್ಗೆ ಮಾತನಾಡಿ, ಅಮುಲ್ ತನ್ನ ಪ್ರಸ್ತುತ ಗ್ರಾಹಕರ ನೆಲೆಯಲ್ಲಿ ವ್ಯವಹರಿಸುವುದನ್ನು ಬಿಟ್ಟು, ಕರ್ನಾಟಕ ಪ್ರವೇಶಿಸಿ ಇಲ್ಲಿನ ರೈತರಿಗೆ ಅನ್ಯಾಯ ಮಾಡಲು ಯತ್ನಿಸುತ್ತಿದೆ. ಹೀಗಾಗಿಯೇ ನಾನು ಅಮುಲ್ ಪ್ರವೇಶವನ್ನು ವಿರೋಧಿಸುತ್ತೇನೆ. ನಾನು ಮುಖ್ಯಮಂತ್ರಿಯಾದರೆ ಅಮುಲ್ ಹಾಲನ್ನು ಖರೀದಿಸಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಟಿಪ್ಪು ಹಿಂದೂಗಳನ್ನು ಕೊಂದಿಲ್ಲ
ಟಿಪ್ಪು ಸುಲ್ತಾನ್ ವಿರುದ್ಧ ಬಿಜೆಪಿ ಹೇಳುವುದೆಲ್ಲ ರಾಜಕೀಯ ಪ್ರೇರಿತ ಆರೋಪಗಳು. ಆಂಗ್ಲೋ-ಮೈಸೂರು ಯುದ್ಧಗಳು ಯಾರಿಗಾಗಿ ನಡೆದವು? ಟಿಪ್ಪು ಬ್ರಿಟಿಷರಿಗಾಗಿ ಹೋರಾಟ ಮಾಡಿದರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಟಿಪ್ಪು ಹಿಂದೂಗಳನ್ನು ಕೊಂದರು, ದೇಗುಲ ನಾಶಪಡಿಸಿದರು ಎನ್ನುವುದೆಲ್ಲ ಸುಳ್ಳು. ಅವೆಲ್ಲವೂ ಟಿಪ್ಪು ಮತ್ತು ಹೈದರಲಿ ವಿರುದ್ಧ ರಾಜಕೀಯ ಪ್ರೇರಿತ ಆರೋಪಗಳಷ್ಟೆ ಎಂದು ಹೇಳಿದ್ದಾರೆ.
ಇದೇ ವೇಳೆ ನೀವು ಸಿಎಂ ಆದರೆ ಮತ್ತೆ ಟಿಪ್ಪು ಜಯಂತಿ ಆಚರಣೆ ತರುವಿರಾ ಎನ್ನುವ ಪ್ರಶ್ನೆಗೆ, ನಾನು ಸರ್ವಾಧಿಕಾರಿಯಲ್ಲ, ಪ್ರಜಾಪ್ರಭುತ್ವವಾದಿ. ಅದನ್ನು ಅಂದಿನ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಹಿಜಾಬ್ ವಿಚಾರವನ್ನೂ ಪ್ರಸ್ತಾವಿಸಿ ಎಲ್ಲರಿಗೂ ಅವರದ್ದೇ ಸಂಪ್ರದಾಯ, ಆಚರಣೆಗಳಿವೆ. ಅದನ್ನು ಪ್ರಶ್ನಿಸಲು ನಾವು ಯಾರು ? ನಾನೂ ಹಿಂದೂ. ಆದರೆ ನನಗೆ ಮೌಡ್ಯಗಳಿಲ್ಲ ಎಂದಿದ್ದಾರೆ.