Advertisement

ಇ-ಎಜುಕೇಷನ್ ಯೋಜನೆ ದೇಶದ ವಿದ್ಯಾಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ: ಬಿಎಸ್ ವೈ

08:37 AM May 18, 2020 | keerthan |

ಬೆಂಗಳೂರು: ಕೇಂದ್ರ ಸರಕಾರದ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್‍ನ 5ನೇ ದಿನದ ಘೋಷಣೆಗಳು, ಕಾರ್ಮಿಕರಿಗೆ ಉದ್ಯೋಗ ಸೃಜನೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕೆ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರ ಸರ್ಕಾರದ “ಆತ್ಮ ನಿರ್ಭರ್ ಭಾರತ” ದ ಆಶಯ ಸಾಕಾರಗೊಳಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಶ್ರಮಿಸಲಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಆಶ್ವಾಸನೆ ಕೊಟ್ಟಿದ್ದಾರೆ.

“ಟಿ.ವಿ. ಚಾನೆಲ್‍ಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಪಾಠ ಹೇಳುವುದು ಒಂದು ಒಳ್ಳೆಯ ನಿರ್ಧಾರ. ಇದರಿಂದ ಶಾಲಾ ದಿನಗಳನ್ನು ಕಳೆದುಕೊಂಡ ಮಕ್ಕಳಿಗೆ ಒಳ್ಳೆಯದಾಗಲಿದೆ.  ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆ ಇಲ್ಲಿಯವರೆಗೆ ನಾವು ಅಳವಡಿಸಿಕೊಂಡು ಬಂದ ಔಪಚಾರಿಕ ಪದ್ಧತಿಯ ವಿದ್ಯಾರ್ಜನೆಯ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇ-ಎಜುಕೇಷನ್ ಯೋಜನೆ ದೇಶದ ವಿದ್ಯಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ.

ಕೋವಿಡ್-19 ಕಾರಣ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಔದ್ಯೋಗಿಕ ಘಟಕಗಳು ಮತ್ತು ವ್ಯಕ್ತಿಗಳ ವಿರುದ್ಧ ಆರ್ಥಿಕ ದಿವಾಳಿತನದ ಕಾನೂನಿಗೆ ಒಳಪಡಿಸ ಲಾಗುವುದಿಲ್ಲ ಎಂಬ ತೀರ್ಮಾನ ಆರ್ಥಿಕ ಸಂಕಷ್ಟದಲ್ಲಿರುವ ಎಂ.ಎಸ್.ಎಂ.ಇ. ಮಾಲೀಕರಿಗೆ ನೆಮ್ಮದಿ ತರಲಿದೆ ಮತ್ತು ಅವರಿಗೆ ಇನ್ನೊಮ್ಮೆ ಆರ್ಥಿಕ ಪುನಃಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದಿದ್ದಾರೆ.

ಎಲ್ಲಾ ವಲಯಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿವೆ ಎಂದು ಘೋಷಿಸಿದ್ದು, ಇದು ನಷ್ಟದಲ್ಲಿರುವ ಸರ್ಕಾರಿ ವಲಯದ ಸಂಸ್ಥೆಗಳಿಗೆ ಹೊಸ ಜೀವ ಬಂದಂತಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ರಾಜ್ಯ ಜಿ.ಡಿ.ಪಿ.ಯ 3%  ರಿಂದ 5% ಕ್ಕೆ ಏರಿಸಿದ್ದು ರಾಜ್ಯಗಳು ಆರ್ಥಿಕವಾಗಿ ಉಸಿರಾಡುವಂತೆ ಮಾಡಿದೆ. ಕೋವಿಡ್-19 ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳು ತಮ್ಮ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಪುನಃಶ್ಚೇತನ ಗೊಳಿಸುವಲ್ಲಿ ಸಹಾಯಕವಾಗಲಿದೆ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next