Advertisement

ಇಂದು ಸಿಎಂ ದಿಲ್ಲಿಗೆ; ಎಲ್ಲರ ಚಿತ್ತ ವರಿಷ್ಠರತ್ತ

11:25 PM Nov 17, 2020 | mahesh |

ಬೆಂಗಳೂರು: ನಿರೀಕ್ಷೆಯಂತೆ ಸಿಎಂ ಬಿಎಸ್‌ವೈ ಅವರು ಬುಧವಾರ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಪೈಕಿ ವರಿಷ್ಠರು ಯಾವುದಕ್ಕೆ ಹಸುರು ನಿಶಾನೆ ತೋರಲಿದ್ದಾರೆ ಎಂಬುದೇ ಕುತೂಹಲ.

Advertisement

ಇತ್ತೀಚೆಗೆ ವರಿಷ್ಠರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದೆ ಎನ್ನಲಾದ ಮಾತುಕತೆಯಂತೆ ಯಡಿಯೂರಪ್ಪ ದಿಲ್ಲಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಈ ಬಾರಿ ಕೆಲವರನ್ನು ಕೈಬಿಟ್ಟು ಮತ್ತೆ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿರುವುದಾಗಿ ಯಡಿಯೂರಪ್ಪ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಹಾಗಾಗಿ ಸಚಿವರು ಮತ್ತು ಸಚಿವಾಕಾಂಕ್ಷಿಗಳ ಚಿತ್ತ ವರಿಷ್ಠರತ್ತ ನೆಟ್ಟಿದೆ.

ಬುಧವಾರ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಬೆಳಗ್ಗೆ 11.30ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ಅವರು ವಿಶೇಷ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೆಲವರನ್ನು ಸಂಪುಟದಿಂದ ಕೈಬಿಡಬೇಕಾದ ಅನಿವಾರ್ಯದ ಬಗ್ಗೆ ಸಿಎಂ ಸಭೆಯಲ್ಲಿ ಪ್ರಸ್ತಾವಿಸುವ ಸಾಧ್ಯತೆ ಇದೆ.

ಸದ್ಯ ಏಳು ಸ್ಥಾನ ಖಾಲಿ
ಸಂಪುಟದಲ್ಲಿ ಸದ್ಯ ಏಳು ಸಚಿವ ಸ್ಥಾನಗಳು ಖಾಲಿ ಇವೆ. ನಾಲ್ಕೈದು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಯಡಿಯೂರಪ್ಪ ಗಂಭೀರವಾಗಿ ಚಿಂತಿಸಿದ್ದಾರೆ. ಇದರಿಂದ ಖಾಲಿ ಉಳಿಯುವ ಸಚಿವ ಸ್ಥಾನಗಳ ಸಂಖ್ಯೆ 11 ಇಲ್ಲವೇ 12ಕ್ಕೆ ಏರಿಕೆಯಾಗಲಿದೆ. ಈ ಪೈಕಿ ಯಡಿಯೂರಪ್ಪ ಸೂಚಿಸುವ ಐವರು ಮತ್ತು ವರಿಷ್ಠರು ಇಲ್ಲವೇ ಪಕ್ಷ ಸೂಚಿಸುವ ಮೂರ್‍ನಾಲ್ಕು ಮಂದಿಗೆ ಅವಕಾಶ ಕಲ್ಪಿಸಿ ಮೂರು ಸ್ಥಾನ ಖಾಲಿ ಉಳಿಸಿಕೊಳ್ಳಲು ಚಿಂತನೆ ಇದೆ ಎನ್ನಲಾಗಿದೆ.

ವಿಧಾನ ಪರಿಷತ್‌ ಸದಸ್ಯರಾದ ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌ ಜತೆಗೆ ಇತ್ತೀಚೆಗಷ್ಟೇ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ಖಚಿತ. ಉಳಿದ ಸ್ಥಾನಗಳನ್ನು ಜಾತಿ, ಪ್ರಾದೇಶಿಕತೆ, ಹಿರಿತನ, ಹೊಸ ಅವಕಾಶ ಇತರೆ ಆಧಾರದಲ್ಲಿ ಸಮತೋಲನ ಸಾಧಿಸುವ ಚಿಂತನೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದೂ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next