ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೊಮ್ಮಾಯಿ ಅವರು ಕೇಶವ ಕೃಪಾ ಹಾಗೂ ಬಸವ ಕೃಪಾ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ, ಶೇ.40 ಕಮಿಷನ್, ಮತದಾರ ಮಾಹಿತಿ ಕಳ್ಳತನ ಸೇರಿದಂತೆ ಹಲವು ಹಗರಣ, ಭ್ರಷ್ಟಾಚಾರಗಳಿಂದ ಸಂಪೂರ್ಣ ವಿಫಲವಾಗಿದೆ. ಇಂತಹ ವಿಚಾರಗಳಿಂದ ಬೇಸತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನ ಕೆಲ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯಾವುದೇ ಬೇಡಿಕೆ ಹಾಗೂ ಷರತ್ತು ಇಲ್ಲದೆ ಎರಡು ಪಕ್ಷದ ಶಾಸಕರು ಜೆಡಿಎಸ್ ಗೆ ಬರಲಿದ್ದಾರೆ. ಯಾರೇ ಬರುವುದಾದರೂ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದೇ ಸೇರಿಸಿಕೊಳ್ಳಲಾಗುವುದು ಎಂದರು.
ಹಳೇ ಮೈಸೂರು ಭಾಗದಲ್ಲಿ 70 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ 40 ಕ್ಷೇತ್ರಗಳು ಪಕ್ಷದ ಪಾಲಾಗಲಿವೆ. ಈ ಬಾರಿ ಸಂಪೂರ್ಣ ಬಹುಮತವನ್ನು ರಾಜ್ಯದ ಜನತೆ ನೀಡಲಿದ್ದಾರೆ. ಅಧಿಕಾರಕ್ಕೆ ಬಂದರೆ ಆರೋಗ್ಯ, ಶಿಕ್ಷಣ, ವಸತಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದರು.
ಇದನ್ನೂ ಓದಿ:ನಾಡ ದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ಜಾರಿಗೆ ಶಿಫಾರಸು
ಬಸವರಾಜ ಹೊರಟ್ಟಿ ಹಾಗೂ ಎನ್.ಎಚ್.ಕೋನರಡ್ಡಿ ಅವರು ಪಕ್ಷದಲ್ಲಿ ಕೊಡುವ ಸ್ಥಾನದಲ್ಲಿದ್ದರು. ಇಂದು ಟಿಕೆಟ್ ಬೇಡುವ ಹಂತಕ್ಕೆ ಇಳಿದ್ದಾರೆ. ಕೋನರಡ್ಡಿ ಟಿಕೆಟ್ ಗಾಗಿ ಅರ್ಜಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇನ್ನೂ ಹೊರಟ್ಟಿಯವರ ಪರಿಸ್ಥಿತಿ ಏನಾಗಿದೆ ಎಂಬುವುದು ಜನರು ನೋಡುತ್ತಿದ್ದಾರೆ. ಬಸವ ಕೃಪ ಕಾಯುತ್ತಿದ್ದವರು ಇಂದು ಕೇಶವ ಕೃಪ ಕಾಯುವಂತಾಗಿದೆ. ಕಾಲ ಹೀಗೆ ಇರುವುದಿಲ್ಲ. ಅವರು ಮನಸ್ಸು ಬದಲಾಯಿಸಬಹುದು. ಬೊಮ್ಮಾಯಿ ಅವರು ನಮ್ಮ ಪಕ್ಷದಿಂದ ಹೋದವರು. ಅವರು ಬಂದರೆ ಸ್ವಾಗತ ಮಾಡುತ್ತೇನೆ ಎಂದರು.