ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಚಿವಾಕಾಂಕ್ಷಿಗಳಿಗೆ ಶಾಕ್ ಕೊಟ್ಟರು. ಸಂಪುಟದಲ್ಲಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಭೇಟಿಯಲ್ಲಿ ನಾಲ್ಕು ಮಂತ್ರಿ ಸ್ಥಾನಗಳ ಭರ್ತಿ ವಿಚಾರ ಚರ್ಚೆ ಮಾಡುವುದಿಲ್ಲ ಎಂದರು.
ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ನಾಲ್ಕಾರು ಮಂದಿ ಕೇಂದ್ರ ಸಚಿವರ ಭೇಟಿಯಾಗಲಿದ್ದೇನೆ. ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಕಾರ್ಯಕ್ರಮ ಸದ್ಯವಂತೂ ಇಲ್ಲ. ಪ್ರಹ್ಲಾದ್ ಜೋಷಿಯವರ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ನಡ್ಡಾ ಅವರ ಜತೆ ಚರ್ಚೆ ಮಾಡುತ್ತೇನೆ ಎಂದರು.
ಕಲಬುರಗಿ ಮೈತ್ರಿ ಖಚಿತ: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜತೆ ಮೈತ್ರಿ ವಿಚಾರವಾಗಿ ನಿನ್ನೆ ಕುಮಾರಸ್ವಾಮಿಯವರ ಜತೆ ವಿವರವಾಗಿ ಚರ್ಚೆ ಮಾಡಲಿಲ್ಲ. ಒಟ್ಟಾಗಿ ಹೋಗೋಣ ಎಂದು ಹೇಳಿದ್ದೇನೆ. ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿ ಹೇಳುತ್ತೇನೆ ಎಂದು ಎಚ್ ಡಿಕೆ ಹೇಳಿದ್ದಾರೆ. ಪಾಲಿಕೆಯಲ್ಲಿ ಒಂದಾಗಿ ಕೆಲಸ ಮಾಡಲು ಅವರು ಒಲವು ತೋರಿಸಿದ್ದಾರೆ. ಬಹುತೇಕ ಬಿಜೆಪಿ ಜೆಡಿಎಸ್ ಕಲಬುರಗಿ ಪಾಲಿಕೆಯಲ್ಲಿ ಸೇರಿ ಮೆಜಾರಿಟಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ಬಲೂನ್ ಮಾರಾಟ ಮಾಡುತ್ತಾ ಕನ್ನ ಹಾಕುತ್ತಿದ್ದ ಖದೀಮರು: ಬಗಾರಿಯಾ ಗ್ಯಾಂಗ್‌ನ ಮೂವರ ಬಂಧನ
ಕೇರಳದಲ್ಲಿ ನಿಫಾ ವೈರಸ್ ಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲೂ ಬಿಗಿ ಕ್ರಮ ಕೈಗೊಂಡಿದ್ದೇವೆ. ಗಡಿ ಭಾಗದಲ್ಲಿ ಬಿಗಿ ಕ್ರಮ ಕೈಗೊಂಡಿದ್ದೇವೆ. ನಿಫಾ ವೈರಸ್ ತಡೆಗೆ ಇನ್ನಷ್ಟು ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.