ಹುಬ್ಬಳ್ಳಿ: ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘನೆಗಳ ನಿಷೇಧ ಕುರಿತು ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ನಡೆದ ಹಲವಾರು ಘಟನೆಗಳನ್ನು ಆಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ದಿನದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಕದಡುವುದು ಹಾಗೂ ಮತೀಯ ದ್ವೇಷ ಬಿತ್ತುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹ ಆಧಾರ ಮೇಲೆ ಅವುಗಳ ಮೇಲೆ ಕ್ರಮತೆಗೆದುಕೊಳ್ಳಲಾಗುವುದು ಎಂದರು.
ಮಾರ್ಚ್ 4ರಂದು ಆಯವ್ಯಯ ನಡೆಯುತ್ತದೆ. ಎಲ್ಲೆಲ್ಲಿ ಯಾವ ಪ್ರದೇಶಕ್ಕೆ ಏನೇನು ಸಿಗುತ್ತದೆ ಎಂಬುದು ಗೊತ್ತಾಗುತ್ತದೆ. ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನು ಈಗಲೇ ಹೇಳೋದು ತಪ್ಪಾಗುತ್ತದೆ. ಅದರ ಬಗ್ಗೆ ಮಾ. 4 ರಂದು ನೋಡಿ ಎಂದರು.
ಕಾಂಗ್ರೆಸ್ ಮೇಕೆದಾಟು ಪಾದಯತ್ರೆ ಅದು ರಾಜಕೀಯ ಪಾದಯಾತ್ರೆ ಆಗಿದೆ. ಅವರು ಮೊದಲು ಮಾಡಿದ್ದು ಅದನ್ನೇ, ಈಗ ಮಾಡೋದು ಅದನ್ನೇ. ಅವರ ಕಾಲದಲ್ಲಿ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿದ್ದರು. ಎಚ್.ಡಿ. ಕುಮಾರಸ್ವಾಮಿ ಬಂದಮೇಲೆ ಡಿಪಿಆರ್ ಸಿದ್ಧವಾಯ್ತು. ಹೀಗಾಗಿ ಯಾವ ನೈತಿಕ ಆಧಾರದ ಮೇಲೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಉಕ್ರೇನ್ ದಲ್ಲಿ ರಾಜ್ಯದ ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಪೂರ್ವ ಭಾಗದಲ್ಲೇ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಈಗಾಗಲೇ ಕೇಂದ್ರ ವಿದೇಶಾಂಗ ಸಚಿವರು ಅವರ ಸಂಪರ್ಕದಲ್ಲಿದ್ದಾರೆ. ಯುದ್ಧದ ತೀವ್ರತೆ ಕಡಿಮೆ ಆದ ತಕ್ಷಣ ವಿದ್ಯಾರ್ಥಿಗಳನ್ನು ಕರೆ ತರಲಾಗುವುದು ಎಂದರು.