ಮೈಸೂರು: ಕಾಂಗ್ರೆಸ್ ಅಧ್ಯಕ್ಷನಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಡಿಕೆಶಿ ಅವರಿಗೆ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿಕೆಶಿ ನಾನೊಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ. ಅವರ ತಟ್ಟೆಯಲ್ಲಿ ಏನಿದೆ ಎನ್ನುವುದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಬರ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾನಾಡಿದ ಅವರು, ನಾಡಿನಲ್ಲಿ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತಿದೆ. ಕಬಿನಿ, ಕಾವೇರಿ ಏಕಕಾಲಕ್ಕೆ ಭರ್ತಿ ಆಗುವುದು ಅಪರೂಪ. ಈ ಬಾರಿ ಒಟ್ಟಿಗೆ ಭರ್ತಿಯಾಗಿದೆ. ತಡ ಮಾಡದೆ ಎರಡೂ ಕಡೆ ಬಾಗಿನ ಸಮರ್ಪಿಸಬೇಕೆಂಬ ಕಾರಣಕ್ಕೆ ಬಂದಿದ್ದೇನೆ. ಕಬಿನಿ, ಕೆ.ಆರ್.ಎಸ್. ಗೆ ತೆರಳಿ ಬಾಗಿನ ರ್ಪಿಸುತ್ತೇನೆ ಎಂದರು.
ಇದನ್ನೂ ಓದಿ: ಡಿವೈಎಸ್ಪಿ ಹತ್ಯೆ ಬೆನ್ನಲ್ಲೇ ವಾಹನ ಹರಿಸಿ ಜಾರ್ಖಂಡ್ ಮಹಿಳಾ ಸಬ್ ಇನ್ಸ್ ಪೆಕ್ಟರ್ ಹತ್ಯೆ
ಜಿ.ಎಸ್.ಟಿ. ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ ನಿರಾಕರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿ.ಎಸ್.ಟಿ. ಕಾನೂನು ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದೆ. ಈಗ ಕೊರೋನಾದಿಂದಾಗಿ ಎರಡು ವರ್ಷ ರಾಜ್ಯಗಳ ಅದಾಯ ಇಳಿಮುಖವಾಗಿದೆ. ಈ ಕಾರಣಕ್ಕೆ 5 ವರ್ಷದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಕೋರಿಕೊಂಡಿದ್ದವು. ಜಿ.ಎಸ್.ಟಿ ಸಂವಿಧಾನಾತ್ಮಕವಾಗಿ ರೂಪಿಸಿರುವ ಕಾನೂನು. ಅದನ್ನು ತಕ್ಷಣಕ್ಕೆ ಬದಲಿಸಲಾಗದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ ಉಳಿಸಿರುವ ಜಿ.ಎಸ್.ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ. ಈಗಾಗಲೇ ಸ್ವಲ್ಪ ನೀಡಿದೆ. ಬಾಕಿ ಮೊತ್ತ ಶೀಘ್ರ ಪಾವತಿಸಲಿದೆ ಎಂದರು.
ಹೆಚ್ ಎಎಲ್ ನಿಂದ ವಿಶೇಷ ವಿಮಾನ ಮೂಲಕ ಮೈಸೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಚಾಮುಂಡಿ ವರ್ಧಂತ್ಯುತ್ಸವ ಹಿನ್ನೆಲೆ ಮೈಸೂರಿನಲ್ಲಿ ನಾಡ ದೇವತೆ ಚಾಮುಂಡಿ ದೇವಿ ದರ್ಶನ ಪಡೆದು, ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಕಬಿನಿ ಜಲಾಶಯದತ್ತ ಪ್ರಯಾಣ ಬೆಳೆಸಿ ಕಬಿನಿ ಮತ್ತು ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.