ಹುಬ್ಬಳ್ಳಿ: ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಂಡರನ್ನು ಮಟ್ಟಹಾಕಲು ಕಠಿಣ ಕ್ರಮಕ್ಜೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಅವಮಾನ ಮಾಡುವುದನ್ನು ಸಹಿಸಿಕೊಳ್ಳಲಾಗದು. ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಗೌರವ ನೀಡಬೇಕು. ಅದರ ಬದಲು ಪ್ರತಿಮೆಗಳನ್ನು ಅವಮಾನಿಸುವ ಮೂಲಕ ಸಮಾಜದಲ್ಲಿ ಕ್ಷೋಭೆ ಸೃಷ್ಟಿಸಲು ಮುಂದಾದರೆ ಅಂತಹ ಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದರು.
ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಹಾಗೂ ಇಂತಹ ಘಟನೆಗಳು,ಪುನಃ ನಡೆಯದಂತೆ ಪೊಲೀಸರು ದೀರ್ಘಾವಧಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಬಂದ ವಾಹನಗಳ ಮೇಲೆ ಕಲ್ಲು ತೂರಾಟ: 27 ಮಂದಿ ಬಂಧನ
ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಇಂತಹ ಘಟನೆ ನಡೆಯುವುದರ ಹಿಂದೆ ಹಲವಾರು ಕಾರಣಗಳು ಇರಬಹುದು ಇದೆಲ್ಲದರ ಬಗ್ಗೆಯೂ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.