Advertisement
ಮುಂದಿನ ಚುನಾವಣೆಯಲ್ಲಿಯೂ ಬಸವರಾಜ ಬೊಮ್ಮಾಯಿ ಅವರದ್ದೇ ನೇತೃತ್ವ ಎಂದು ಖುದ್ದು ಅಮಿತ್ ಶಾ ಸಹಿತ ರಾಷ್ಟ್ರೀಯ ಬಿಜೆಪಿ ನಾಯಕರು ಹೇಳಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಅಧಿಕಾರಕ್ಕೆ ತರುವ ಹೊಣೆಗಾರಿಕೆ ಅವರ ಮೇಲಿದೆ. ಹೀಗಾಗಿ, ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
Related Articles
Advertisement
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪ್ರಭಾವಿಯಾಗಿದ್ದಾರೆ. ಇದೇ ಕ್ಷೇತ್ರದಿಂದ ಅವರು ಆಯ್ಕೆಯಾಗಿ ಸಚಿವರೂ ಆಗಿದ್ದಾರೆ. ಮಲ್ಲಿಕಾರ್ಜುನ್ ಕೂಡ ಸಾದರ ಲಿಂಗಾಯತರೇ ಆಗಿದ್ದು ಅವರು ಮುಂದಿನ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ಪರ್ಧೆ ಕಠಿಣವೂ ಆಗಲಿದೆ. ಆದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾಗಬಹುದೆಂಬ ಮಾತೂ ಇದೆ.
ಹಾಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಡಾ| ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನ ಕಾರಣದಿಂದ ಸ್ಪರ್ಧಿಸಲು ನಿರಾಕರಿಸಿದರೆ, ಅವರ ಪುತ್ರ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣದಿಂದ (ತಂದೆ ಆಯ್ಕೆಯಾದ ಕ್ಷೇತ್ರ) ಸ್ಪರ್ಧಿಸಬಹುದು. ಆಗ ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿ ಕಣಕ್ಕಿಳಿದರೂ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದರೆ ಅನುಕೂಲವಾಗಬಹುದು.
ಸ್ವಲ್ಪ ಮಟ್ಟಿನ ಆತಂಕವಿದೆ: ಬಸವರಾಜ ಬೊಮ್ಮಾಯಿಯವರು ಸ್ವಕ್ಷೇತ್ರ ಶಿಗ್ಗಾವಿ ಜತೆಗೆ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಹೆಚ್ಚಾಗಿರುವ ಕಾರಣ ಸ್ವಲ್ಪ ಮಟ್ಟಿನ ಆತಂಕವಿದ್ದು ಪರ್ಯಾಯ ಕ್ಷೇತ್ರ ನೋಡುತ್ತಿದ್ದಾರೆಂದು ಹೇಳಲಾಗಿದೆ. ಮುಂದಿನ ಚುನಾವಣೆಗಾಗಿ ಈಗಲೇ ಇನ್ನೊಂದು ಕ್ಷೇತ್ರದ ತಯಾರಿ ಮಾಡಿಕೊಳ್ಳುತ್ತಿದ್ದು ಈ ವಿಚಾರ ಬೊಮ್ಮಾಯಿ ಅವರಾಗಿಯೇ ಖಚಿತಪಡಿಸುವವರೆಗೂ ಗುಟ್ಟಾಗಿಯೇ ಉಳಿಯಲಿದೆ.
ಎಚ್.ಕೆ. ನಟರಾಜ