Advertisement

ಕೇಂದ್ರ ಸಚಿವರ ಭೇಟಿ ಮಾಡಿದ ಸಿಎಂ: ನೀರಾವರಿಗೆ ಸ್ಪಂದನೆ 

11:58 PM Aug 25, 2021 | Team Udayavani |

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ಹಾಗೂ ಮಹದಾಯಿ ಯೋಜನೆ ಜಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆಗೆ ಕೇಂದ್ರ ಸರಕಾರ ಸಹಮತ ವ್ಯಕ್ತಪಡಿಸಿದೆ.

Advertisement

ಬುಧವಾರ ದಿಲ್ಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ದೊರೆಯಬೇಕಿರುವ ಅನುಮತಿ ಹಾಗೂ ಅಂತಾರಾಜ್ಯ ವಿವಾದಗಳನ್ನು ಪರಿಹರಿಸುವ ಕುರಿತಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ರಾಜ್ಯದ ನೀರಾವರಿ ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡುವುದು, ಕೃಷ್ಣಾ ನದಿ ಯೋಜನೆಗೆ ಆಂಧ್ರಪ್ರದೇಶ ಹಾಗೂ  ತೆಲಂಗಾಣ ತಕರಾರು ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಕೇಂದ್ರ ಸರಕಾರದ ಸಹಕಾರ ನೀಡುವುದು, ಭದ್ರಾ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೇಕೆದಾಟು ಬಗ್ಗೆ ಭರವಸೆ:

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಬಗ್ಗೆ ಕೇಂದ್ರ ಜಲ ಶಕ್ತಿ ಸಚಿವರೊಂದಿಗೆ ಚರ್ಚೆ  ಮಾಡಲಾಗಿದೆ. ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಇದು ಬೆಂಗಳೂರಿಗೆ ಕುಡಿಯುವ ನೀರಿನ  ಯೋಜನೆ. ಕುಡಿಯುವ ನೀರಿಗಾಗಿ ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಈ ಯೋಜನೆಯ ಡಿಪಿಆರ್‌ ಸಹ ಸಲ್ಲಿಕೆ ಯಾಗಿದೆ ಎಂದು ಹೇಳಿದ್ದೇವೆ. ಈ ಬಗ್ಗೆ ಚಿಂತೆ ಮಾಡಬೇಡಿ, ಮುಂದಿನ ಸಿಡ್ಲ್ಯೂಸಿ ಸಭೆಯಲ್ಲಿ ತರುವುದಾಗಿ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

Advertisement

ರೈತರ ಮಕ್ಕಳ ಸ್ಕಾಲರ್‌ಶಿಪ್‌:

ಇನ್ನು ಸೆಪ್ಟಂಬರ್‌ 5ರಂದು ಪಿಯುಸಿಯಿಂದ ಪಿಜಿವರೆಗೆ ರೈತರ ಮಕ್ಕಳ ಸ್ಕಾಲರ್‌ಶಿಪ್‌ ನೀಡುವ ಯೋಜನೆಗೆ ಚಾಲನೆ ನೀಡಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎತ್ತಿನಹೊಳೆ ಬಗ್ಗೆ ಚರ್ಚೆ :

ಎತ್ತಿನಹೊಳೆ ಯೋಜನೆ ಬಗ್ಗೆ ಹಲವು ಆಯಾಮಗಳಲ್ಲಿ ಚರ್ಚೆಯಾಗಿದೆ. ಈ ಯೋಜನೆಗೆ ಜಲಜೀವನ್‌ ಮಿಷನ್‌ ಅಡಿಯಲ್ಲಿ ಹಣ ನೀಡಲು ಕೇಳಿದ್ದೇವೆ. ಕೃಷ್ಣಾ ಮೇಲ್ದಂಡೆ ನೀರು ಹಂಚಿಕೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸೀಮಿತಗೊಂಡ ವ್ಯಾಜ್ಯವಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳನ್ನೂ ತೆಲಂಗಾಣ ಅರ್ಜಿಯಲ್ಲಿ ಸೇರಿಸಿದೆ. ಈ ಬೆಳವಣಿಗೆಯನ್ನು ಕೇಂದ್ರ ಜಲಶಕ್ತಿ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕಳಸಾ ಬಂಡೂರಿಗೆ ಯೋಜನೆಗೆ ಡಿಪಿಆರ್‌ ಮಾಡಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ತಮಿಳುನಾಡಿನ ವೆಲ್ಲಾರ್‌ ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಅದು ನ್ಯಾಯಸಮ್ಮತ ಯೋಜನೆ ಅಲ್ಲ ಎಂದು ಹೇಳಿದೆ. ಈ ಬಗ್ಗೆ ಲಿಖೀತವಾಗಿ ದೂರು ನೀಡಲು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾನೂನು ತಂಡದ ಜತೆಗೆ ಮಾತನಾಡಿ, ಮಹದಾಯಿ, ಮೇಕೆದಾಟು ಯೋಜನೆಗಳ ಬಗ್ಗೆ ಕಾನೂನಾತ್ಮಕವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next