ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ನಾನು ಏನೋ ಅಂದುಕೊಂಡಿದ್ದೆ. ಆದರೆ ರಾಜ್ಯದಲ್ಲಿ ಆಡಳಿತ ಹಾಳಾಗುತ್ತಿರುವುದಕ್ಕೆ ಅವರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಅವರ ರಕ್ಷಣೆ ಮಾಡುತ್ತಿದ್ದಾರೆ. ಸಿಎಂ ಹಾಗೂ ಯಡಿಯೂರಪ್ಪ ನೇರವಾಗಿ ಈಶ್ವರಪ್ಪ ತಪ್ಪು ಮಾಡಿಲ್ಲ ಎಂದು ಹೇಳಿ ತನಿಖೆಗೆ ಮೊದಲೇ ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದರು.
ಎಫ್ಐಆರ್ ಕುರಿತ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಈಶ್ವರಪ್ಪ ಅವರ ವಿರುದ್ದ ಎಲ್ಲಿ ಎಫ್ಐಆರ್ ಹಾಕಿದ್ದಾರೆ? ಭ್ರಷ್ಟಾಚಾರದಲ್ಲಿ ಸಿಕ್ಕಿ ಹಾಕೊಂಡವರ ವಿರುದ್ದ ಎಲ್ಲಿದೆ ಕೇಸ್? ಇವರು ಈಶ್ವರಪ್ಪರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಮಾಜಿ ಸಚಿವ ಈಶ್ವರಪ್ಪ ಭೇಟಿಯಾದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ನಿಯೋಗ
ಸಿಎಂ ಗೆ ನೀರಾವರಿ ಇಲಾಖೆ ಗುತ್ತಿಗೆದಾರರು ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಣ್ಣ ಸಣ್ಣ ಗುತ್ತಿಗೆದಾರರನ್ನು ಮುಗಿಸುವ ಕೆಲಸ ಮಾಡಿದ್ದಾರೆ. ಅವರಿಂದ ಕಮಿಷನ್ ಪಡೆಯಲು ಆಗುವುದಿಲ್ಲವೆಂದು ದೊಡ್ಡವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ಸಣ್ಣ ಗುತ್ತಿಗೆದಾರರು ಪರ ಇರುವವರು ನಾವು. ವ್ಯವಸ್ಥೆಯಲ್ಲಿ ಅವರು ಇರಬೇಕು ಎಂದರು.
ಉತ್ತರಖಂಡದ ಕೇದಾರಪೀಠದ ಜಗದ್ಗುರು ರಾವಲ್ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಭೇಟಿಯ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ. ಅದಕ್ಕೆ ಅವರು ಮೆಚ್ಚಿದರು. ಅದಕ್ಕೆ ನಮ್ಮಮನೆಗೆ ಬಂದಿದ್ದರು. ನಾನು ಪಾದಪೂಜೆ ಮಾಡಿದ್ದೇನೆ. ಬೇರೆ ಕೆಲ ವಿಷಯಗಳನ್ನು ಮಾತನಾಡಿದ್ದಾರೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದರು.