ಸುವರ್ಣ ವಿಧಾನಸೌಧ: ಮಹಾಭಾರತದಲ್ಲಿ ಬರುವ ಅರ್ಜುನನ ಸ್ವಭಾವ ಅವನಿಗೆ ಹೊಗಳಬೇಕು, ಆದರೆ, ಕರ್ಣ ಹಾಗೆ ಅಲ್ಲ; ಸುಮ್ಮನೆ ಕೆಲಸ ಮಾಡುವ ಸ್ವಭಾವ ಕರ್ಣನದ್ದು. ಅದರಂತೆ ನಮ್ಮದು ಕರ್ಣನ ವಂಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೂರಕ ಅಂದಾಜುಗಳ ಪ್ರಸ್ತಾವನೆ ಮೇಲೆ ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ, “ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಶು ಕದಾಚನ….ಶ್ಲೋಕ ಹೇಳುವಂತೆ ಯಾರು ಯಾವ ಕೆಲಸ ಮಾಡಬೇಕು ಅವರು ಆದನ್ನು ಮಾಡಬೇಕು. ನಾನು ವಿರೋಧಪಕ್ಷದಲ್ಲಿದ್ದೇನೆ ಟೀಕೆ ಮಾಡುವುದು, ಆಡಳಿತ ಪಕ್ಷದ ಅಂಕು-ಡೊಂಕುಗಳನ್ನು ತಿದ್ದುವುದು ನನ್ನ ಕೆಲಸ. ಅದು ಬಿಟ್ಟು ಹೊಗಳಲು ಆಗುತ್ತಾ. ಬಿಜೆಪಿಗೆ ರಾಮ-ಕೃಷ್ಣ ಓಟಿನ ವಿಚಾರ. ಆವರು ಭಗವದ್ಗೀತೆ ಓದಲ್ಲ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಕೃಷ್ಣಭೈರೇಗೌಡರ ಜ್ಞಾನ, ತಿಳುವಳಿಕೆ ಬಗ್ಗೆ ಎರಡು ಮಾತಿಲ್ಲ. ಆದರೆ, ರಾಜಕೀಯ ಮಾತು ಆವರ ವ್ಯಕ್ತಿತ್ವಕ್ಕೆ ಭೂಷಣವಲ್ಲ. ನೀವು ನಮ್ಮನ್ನು ಹೋಗಳಿ ಎಂಬ ನಿರೀಕ್ಷೆ ನಾನು ಮಾಡಲ್ಲ. ಅರ್ಜುನ-ಕರ್ಣ ಇಬ್ಬರ ವ್ಯಕ್ತಿತ್ವ ನಿಮಗೆ ಗೊತ್ತಿರಬೇಕು. ಯಾವಾಗಲೂ ತನ್ನನ್ನು ಹೊಗಳುತ್ತಿರಬೇಕು ಅನ್ನುವುದು ಅರ್ಜುನ ಸ್ವಭಾವ. ಆದರೆ, ಕಣ ಆ ರೀತಿ ಅಲ್ಲ. ತನ್ನ ಕೆಲಸ ತಾನು ಮಾಡುವುದಷ್ಟೇ ಆತನ ಸ್ವಭಾವ. ಆ ಪ್ರಕಾರ ನಮ್ಮದು ಕರ್ಣನ ವಂಶ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “15ನೇ ಹಣಕಾಸು ಆಯೋಗದಲ್ಲಿ ಶೇ.25ರಷ್ಟು ಹಣ ಕಡಿಮೆ ಆಗಿದೆ. ಕೇಂದ್ರ ಸರ್ಕಾರ ನಮಗೆ ಬರುವ ಜಿಎಸ್‌ಟಿ ಪಾಲನ್ನು ನೀಡುತ್ತಿಲ್ಲ. ಇದರಲ್ಲಿ ನಮಗೆ ಅನ್ಯಾಯವಾಗಿದೆ. ಆದ್ದರಿಂದ ಸರ್ಕಾರ ಸಾಲ ಮಾಡುತ್ತಿದೆ. ಆದ್ದರಿಂದ ಕೇಂದ್ರದ ಮೇಲೆ ಒತ್ತಡ ಹೇರಿ, ರಾಜ್ಯದ ಪಾಲನ್ನು ಪಡೆಯಬೇಕು. ಕಳೆದ ವರ್ಷ ಪ್ರವಾಹ ಪರಿಹಾರ 19 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ಇನ್ನೂ ಕೊಟ್ಟಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರದ ಮನಸೋಇಚ್ಛೇ, ಯದ್ವಾತದ್ವಾ ನೀತಿಗಳಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರದ ಪಾಲು ಕಡಿಮೆ ಆಗುತ್ತಿದೆ. ಇದರ ಪರಿಣಾಮ ರಾಜ್ಯ ಸರ್ಕಾರ ಸಾಲದ ಸುಳಿಗೆ ಸಿಲುಕುತ್ತಿದೆ. ಇದನ್ನು ಸರಿಪಡಿಸದಿದ್ದರೆ ರಾಜ್ಯದ ಆರ್ಥಿಕ ಸ್ಥಿತಿ ಹಳಿ ತಪ್ಪಲಿದೆ. ಸಾಲದ ಮೇಲಿನ ಬಡ್ಡಿ ಪಾವತಿ ಪ್ರಮಾಣ ಒಟ್ಟು ಆದಾಯದ ಶೇ.13ರಷ್ಟಿದೆ. ಸಾಲದ ಅಸಲು ಮತ್ತುಅದರ ಮೇಲಿನ ಬಡ್ಡಿ ಪಾವತಿಗೆ 43ಸಾವಿರ ಕೋಟಿ ರೂ. ವ್ಯಯ ಆಗುತ್ತಿದೆ. ಈ ವರ್ಷ ಸರ್ಕಾರ 80 ಸಾವಿರ ಕೋಟಿ ರೂ. ಸಾಲ ಮಾಡಿದೆ. ಹೀಗೆ ಮುಂದುವರಿದರೆ ಆರ್ಥಿಕವಾಗಿ ರಾಜ್ಯ ಕಂಗಾಲಾಗಲಿದೆ’.
– ಕೃಷ್ಣಭೈರೇಗೌಡ, ಸಚಿವ.