ಬೆಂಗಳೂರು: ಸರ್ಕಾರ ಉರುಳಿಸಲು ಯಾವ ಕಿಂಗ್ ಪಿನ್ ಗಳ ಬಳಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಗೊತ್ತಿದೆ. ಕೆಲವರಿಗೆ ಅಡ್ವಾನ್ಸ್ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂಬುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಬಾಂಬ್ ಹಾಕಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಿಯೋಗ ಐಟಿಗೆ ದೂರು ನೀಡಿದೆ.
ಯಡಿಯೂರಪ್ಪ, ಯೋಗೇಶ್ವರ್, ವಿಶ್ವನಾಥ್ ಮೂಲಕ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರನ್ನು ಸೆಳೆಯಲು 50, 100 ಕೋಟಿ ರೂಪಾಯಿಯ ಆಮಿಷವೊಡ್ಡಲಾಗಿದೆ. ಹೀಗಾಗಿ ಹಣದ ಆಮಿಷವೊಡ್ಡಿದವರ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಶೋಧ ನಡೆಸಲಿ. ಬಿಜೆಪಿ ನಾಯಕರ ವಿರುದ್ಧ ಐಟಿ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.
ನಾವು ಯಾವ ಕಾಂಗ್ರೆಸ್ ಶಾಸಕರಿಗೂ ಆಮಿಷವೊಡ್ಡಿಲ್ಲ. ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಸರ್ಕಾರದ ಬುಡ ಅಲುಗಾಡುತ್ತಿದೆ. ನಮ್ಮ ವಿರುದ್ಧ ದೂರು ಕೊಟ್ಟರೂ ತೊಂದರೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.