Advertisement
ಸೇವೆ ಖಾಯಂ ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟು ಗುತ್ತಿಗೆ ಪೌರಕಾರ್ಮಿಕರು ಶುಕ್ರವಾರ ರಾಜ್ಯವ್ಯಾಪಿ ಮುಷ್ಕರ ಆರಂಭಿಸಿದ್ದರು. ಅದರಂತೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಜತೆಗೆ ಬೇಡಿಕೆ ಈಡೆರಿಕೆಗಾಗಿ ಶನಿವಾರದಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪೌರಕಾರ್ಮಿಕ ಮುಖಂಡರ ಸಭೆ ನಡೆಸಿ, ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಪೌರ ಕಾರ್ಮಿಕರು ಮನೆ ನಿರ್ಮಿಸಲು ಮುಂದಾದರೆ ಅವರಿಗೆ ಸರಕಾರದಿಂದ 7 ಲಕ್ಷ ರೂ. ಸಹಾಯಧನ ನೀಡಲಾಗುವುದು. ಪ್ರಸ್ತುತ 700 ಜನಕ್ಕೆ ಒಬ್ಬ ಪೌರ ಕಾರ್ಮಿಕರಿದ್ದಾರೆ. ಅದನ್ನು 500 ಜನರ ಮಿತಿಗೆ ಬದಲಾಯಿಸುವ ಬೇಡಿಕೆಗೂ ಸರಕಾರ ಒಪ್ಪಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕುರಿತು ಕಾರ್ಮಿಕ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಸಚಿವರಾದ ಬೈರತಿ ಬಸವರಾಜು, ಎಂಟಿಬಿ ನಾಗರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.