ವಿಧಾನಸಭೆ: “ಮೀಸಲಾತಿ ಅತ್ಯಂತ ಸೂಕ್ಷ್ಮ ವಿಚಾರ. ಒಂದು ಸಮುದಾಯದ ಬೇಡಿಕೆ ನ್ಯಾಯಬದ್ಧವಾಗಿದ್ದರೂ ಅದನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತೂಂದು ಸಮುದಾಯಕ್ಕೆ ಅನ್ಯಾಯವಾಗದಂತೆ ಮತ್ತು ಸಾಮರಸ್ಯ ಕದಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಈ ವಿಚಾರದಲ್ಲಿ ಅವಸರದ ತೀರ್ಮಾನ ಸಾಧ್ಯವಿಲ್ಲ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವ ಬೇಡಿಕೆ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೀಸಲಾತಿ ವಿಚಾರವಾಗಿ ಅನೇಕ ಸಮುದಾಯಗಳು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವ ಬಗ್ಗೆ ಮುಖ್ಯಮಂತ್ರಿಯವರು ಕಳೆದ ಅಧಿವೇಶನದಲ್ಲಿ ಹೇಳಿದ್ದರು. ಆದರೆ, ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛೆ ಇದೆಯೋ, ಇಲ್ಲವೋ ಎಂಬುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಇದು ಶೂನ್ಯವೇಳೆಯಲ್ಲಿ ತರುವಂತಹ ವಿಷಯ ಅಲ್ಲದಿದ್ದರೂ ಸಭಾಧ್ಯಕ್ಷರು ಅನುಮತಿ ನೀಡಿದ್ದರಿಂದ ಶಾಸಕರ ಪ್ರಸ್ತಾಪಕ್ಕೆ ಉತ್ತರ ನೀಡುತ್ತಿದ್ದೇನೆ. ಮೀಸಲಾತಿ ನೀಡಲು, ಹೆಚ್ಚಿಸಲು, ಒಂದು ವರ್ಗದಿಂದ ಮತ್ತೂಂದು ವರ್ಗಕ್ಕೆ ಸೇರಿಸಲು ಅದರದೇ ಆದ ಕಾನೂನು ಇದೆ. ಸಂವಿಧಾನದ ನಿಯಮಗಳಿವೆ ಹಾಗೂ ನ್ಯಾಯಾಲಯದ ಹಲವಾರು ತೀರ್ಪುಗಳಿವೆ. ಮೀಸಲಾತಿ ಪ್ರಮಾಣ ಶೇ.50 ದಾಟಬಾರದು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಿತಿ ಹೇರಿದೆ. ಅದನ್ನೇ ಈವರೆಗೆ ಪಾಲಿಸಲಾಗುತ್ತಿದೆ. ಸರ್ಕಾರ ಏನೇ ಮಾಡಿದರೂ ಕಾನೂನು ರೀತಿಯಲ್ಲಿ ಮಾಡಬೇಕು ಎಂದರು.
ಮೀಸಲಾತಿ ನಿಗದಿಗೆ “ವಾಸ್ತವ ದತ್ತಾಂಶ’ ಮುಖ್ಯ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಕೆಲಸ ಮಾಡುತ್ತಿದೆ. ಬಹುತೇಕ ಜಿಲ್ಲೆಗಳ ಪ್ರವಾಸ ಕೈಗೊಂಡಿದೆ. ಇನ್ನೂ 13 ಜಿಲ್ಲೆಗಳ ಪ್ರವಾಸ ಬಾಕಿ ಇದೆ. ಆಯೋಗದ ಕೆಲಸ ಶೇ.50ರಷ್ಟು ಆಗಿದೆ. ಆಯೋಗದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಯತ್ನಾಳ್, ಹೆಬ್ಬಾಳ್ಕರ್ ಧರಣಿ:
ಮೀಸಲಾತಿ ಬಗ್ಗೆ ಚರ್ಚೆಗೆ ಸದನದಲ್ಲಿ ಅವಕಾಶ ಕೊಡಬೇಕು ಹಾಗೂ ಈ ಬಗ್ಗೆ ಸರ್ವಪಕ್ಷ ಸಭೆ ಕರೆಯಬೇಕು ಎಂದು ಪಟ್ಟುಹಿಡಿದ ಬಸನಗೌಡ ಪಾಟೀಲ್ ಯತ್ನಾಳ್ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಇದಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಸಾಥ್ ನೀಡಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಕೆಲ ಶಾಸಕರೂ ಅದಕ್ಕೆ ಧ್ವನಿಗೂಡಿಸಿದರು. ಈ ಬಗ್ಗೆ 2 ಬಾರಿ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಧರಣಿ ಕೈಬಿಟ್ಟು ತಮ್ಮ ಸ್ಥಾನಕ್ಕೆ ತೆರಳಿದರು.