ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಗಳು ಮತ್ತು ವ್ಯಕ್ತಿತ್ವ ಈಗ ಹಾಡುಗಳ ರೂಪದಲ್ಲಿ ಕೇಳಬಹುದಾಗಿದೆ. ಈ ಸಂಬಂಧದ ವೀಡಿಯೋ ಸಹಿತ ಧ್ವನಿಸುರುಳಿಯನ್ನು ಮುಖ್ಯಮಂತ್ರಿಗಳ ಅಭಿಮಾನಿ ಬಳಗ ಹೊರತಂದಿದೆ.
ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು, ಪೌರಕಾರ್ಮಿಕರು ಹೀಗೆ ಸಮಾಜದ ವಿವಿಧ ವರ್ಗಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಕೊಡುಗೆಗಳನ್ನು ಆಧರಿಸಿ ಒಟ್ಟಾರೆ ಐದು ಹಾಡುಗಳನ್ನು ಅಭಿಮಾನಿ ಬಳಗ ರಚಿಸಿದೆ.
ಸಿಎಂ ಒಬ್ಬ ಸಾಮಾನ್ಯ ವ್ಯಕ್ತಿ (ಕಾಮನ್ ಮ್ಯಾನ್) ಆಗಿ ಕೂಡ ಹೇಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂಬುದರ ಬಗ್ಗೆಯೂ ಹಾಡು ರಚಿಸಲಾಗಿದ್ದು, ಅದಕ್ಕೆ ಸಂಗೀತದ ಜತೆಗೆ ವೀಡಿಯೋ ತುಣುಕುಗಳನ್ನು ಸಂಯೋಜನೆ ಮಾಡಲಾಗಿದೆ.
ರೈತರ ಮಕ್ಕಳಿಗೆ ವಿದ್ಯಾನಿಧಿ, ಮಹಿಳೆಯರ ಸ್ವಾವಲಂಬನೆಗಾಗಿ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಿರುವುದು, ಅಮೃತ ಯೋಜನೆ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖೀಸಲಾಗಿದೆ.
ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಐದೂ ಹಾಡುಗಳ ಧ್ವನಿಸುರುಳಿಯನ್ನು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಸಿಕ್ಕಿರುವ ಅಲ್ಪಾವಧಿಯಲ್ಲೇ ಅನೇಕ ಜನಪರ ಸಾಧನೆಗಳನ್ನು ಸದ್ದಿಲ್ಲದೆ ಮಾಡಿದ್ದಾರೆ. ಅದನ್ನು ಹೆಚ್ಚು ವೈಭವೀಕರಿಸಿಕೊಳ್ಳದೆ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರು.