Advertisement

ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

07:21 PM Dec 13, 2022 | Team Udayavani |

ಚಾಮರಾಜನಗರ: ನೈಸರ್ಗಿಕ ಸಂಪತ್ತು ಹಾಗೂ ಕೆರೆಕಟ್ಟೆಗಳಿಂದ ತುಂಬಿರುವ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹಂತ ಹಂತವಾಗಿ ನೀರು ತುಂಬಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಮಂಗಳವಾರ, ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇಡೀ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳನ್ನು ತುಂಬಿಸುವ ಸಮಗ್ರ ಅಭಿವೃದ್ದಿ ಯೋಜನೆಗೆ ಎರಡು ಪ್ರಸ್ತಾವನೆಗಳು ಮುಂದಿದೆ. 754 ಕೋಟಿ ರೂ. ವೆಚ್ಚದ ಯೋಜನೆಯನ್ನು ಈಗಾಗಲೇ ಅನುಮೋದನೆಗೆ ಕಳುಹಿಸಲಾಗಿದೆ. 1100 ಕೋಟಿ ರೂ.ವೆಚ್ಚದ ಯೋಜನೆಗೆ ವಿಸ್ತೃತ‌ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆಯಾಗಬೇಕಿದೆ. ಒಟ್ಟಾರೆ ಇಡೀ ಚಾಮರಾಜನಗರ ಜಿಲ್ಲೆಯ ಎಲ್ಲಾ ಭಾಗದ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಲು ಅಗತ್ಯವಿರುವ ಯೋಜನೆಯನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಳವಾಗಲಿದೆ. ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರಿನ ಪೂರೈಕೆಗೂ ಅನುಕೂಲವಾಗಲಿದೆ. ಆರೋಗ್ಯಕರ ಜನವಸತಿಗಳಿಗೆ ಉಪಯೋಗವಾಗಲಿದೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಲಿದ್ದೇವೆ ಎಂದರು.

ಚಾಮರಾಜನಗರ ಜಿಲ್ಲೆಯನ್ನು ಕೈಗಾರಿಕೆ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ. ಕೈಗಾರಿಕಾ ವಸಾಹತು ನಿರ್ಮಾಣ ಮಾಡಬಹುದು. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ತೆರೆಯಬಹುದು. ಇದರಿಂದ ಯುವ ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

Advertisement

ಶಿಕ್ಷಣ, ಆರೋಗ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದೇವೆ. ಜಿಲ್ಲೆಯ ಆರ್ಥಿಕ ಔದ್ಯೋಗಿಕ ಸಾಮಾಜಿಕ, ಶಿಕ್ಷಣ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ. ಅಭಿವೃದ್ದಿಯ ವಿಷಯದಲ್ಲಿ ಪಕ್ಷ ಭೇದ ಇಲ್ಲ ಎಂದರು.

ಇದನ್ನೂ ಓದಿ: ‘ಗ್ಲೋಬಲ್ ಕರ್ನಾಟಕ ಬೆಟರ್ ಕರ್ನಾಟಕ’ಕ್ಕಾಗಿ ಸಲಹೆ ನೀಡಿ: ಅನಿವಾಸಿ ಕನ್ನಡಿಗರಲ್ಲಿ ಡಿಕೆ‌ಶಿ ಮನವಿ

ಜಲಜೀವನ್‌ ಮಿಷನ್‌ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ನೀಡುವ ಯೋಜನೆಯನ್ನು ಪ್ರಧಾನಿಯವರು ಜಾರಿಗೆ ತಂದಿದ್ದಾರೆ.

ಕೇವಲ ಒಂದೂವರೆ ವರ್ಷಗಳಲ್ಲಿ 8 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 20 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ನೀರು ನೀಡಿದ್ದೇವೆ. ಇನ್ನೂ 25 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡುತ್ತಿದ್ದೇವೆ . ಚಾಮರಾಜನಗರ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಪೂರೈಸುವ 102 ಕೋಟಿ ರೂ. ಯೋಜನೆಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಚಾಮರಾಜನಗರ ಜಿಲ್ಲೆಗೆ ವಿಶ್ವ ವಿದ್ಯಾಲಯ ಮಂಜೂರು ಮಾಡಲಾಗಿದೆ. ಮಾದರಿ ವಿಶ್ವವಿದ್ಯಾಲಯವನ್ನಾಗಿಸಲು ಕ್ರಮ ವಹಿಸಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲೆಯ ಇತರ ಭಾಗಗಳಲ್ಲಿಯೂ ಅನುಷ್ಠಾನ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಂದಾಯ ಸಚಿವ ಆರ್‌. ಅಶೋಕ, ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ನಗರಸಭಾ ಅಧ್ಯಕ್ಷೆ ಸಿ.ಎಂ. ಆಶಾ ನಟರಾಜು, ಸದಸ್ಯರಾದ ಚಂದ್ರಶೇಖರ್‌, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್‌, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌ , ವಿಧಾನಸಪರಿಷತ್‌ ಮಾಜಿ ಸದಸ್ಯ ಕೆ.ಆರ್‌. ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌. ಸುಂದರ್‌, ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್‌, ಮಂಗಲ ಶಿವಕುಮಾರ್‌, ನಾರಾಯಣಪ್ರಸಾದ್‌, ಮುಖಂಡರಾದ ಅಮ್ಮನಪುರ ಮಲ್ಲೇಶ್‌, ವೃಷಭೇಂದ್ರಪ್ಪ, ಡಾ. ಎ.ಆರ್‌. ಬಾಬು, ವಕ್ತಾರ ಅಯ್ಯನಪುರ ಶಿವಕುಮಾರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next