Advertisement

ಸರಕಾರ, ಖಾಸಗಿ ಸಂಸ್ಥೆಗಳು ಒಗ್ಗೂಡಿ ನವ ಕರ್ನಾಟಕ ನಿರ್ಮಾಣ: ಸಿಎಂ ಬೊಮ್ಮಾಯಿ

08:39 PM May 12, 2022 | Team Udayavani |

ಬೆಂಗಳೂರು: ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನವ ಕರ್ನಾಟಕ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಅಶೋಕ ಹೊಟೇಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಟನೆಲಿಂಗ್‌ ಮತ್ತು ಅಂಡರ್‌ಗ್ರೌಂಡಿಂಗ್‌ ಕನ್‌ಸ್ಟ್ರಕ್ಷನ್‌ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ  “ನಿರ್ಮಾಣ 2022’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬದಲಾದ ಕಾಲಘಟ್ಟದಲ್ಲಿ ನಮ್ಮ ಮುಂದೆ ಸವಾಲುಗಳು ಸಾಕಷ್ಟಿವೆ. ಅದೇ ರೀತಿ, ತಂತ್ರಜ್ಞಾನವೂ ಬೆಳೆದಿದೆ. ಈ ತಂತ್ರಜ್ಞಾನಗಳ ನೆರವಿನೊಂದಿಗೆ ಹೊಸ ಸವಾಲುಗಳನ್ನು ಎದುರಿಸಲು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ  ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸುರಂಗ ಮಾರ್ಗ ನಿರ್ಮಾಣ ಹೊಸದಲ್ಲ. ಟನೆಲ್‌ ಬೋರಿಂಗ್‌ ಯಂತ್ರ(ಟಿಬಿಎಂ)ಗಳು ಇಲ್ಲದಿದ್ದಾಗಲೂ 70ರ ದಶಕದಲ್ಲಿ ರಾಜ್ಯದಲ್ಲಿ ಟನೆಲ್‌ಗ‌ಳನ್ನು ಕಾಣಬಹುದು. ಆದರೆ, ಅಂದು ನೀರಾವರಿ ಮತ್ತಿತರ ಉದ್ದೇಶಗಳಿಗೆ ಈ ಸುರಂಗಗಳ ನಿರ್ಮಾಣಗೊಳ್ಳುತ್ತಿದ್ದವು. ಈಗ ಬೆಂಗಳೂರಿನಂತಹ ದಟ್ಟಣೆ ಪ್ರದೇಶದಲ್ಲಿ ಮೆಟ್ರೋ, ಅನಿಲ ಸಂಪರ್ಕ ಸಹಿತ ಹಲವು ಉದ್ದೇಶಗಳಿಗೆ ಸುರಂಗ ನಿರ್ಮಿಸುವುದು ದೊಡ್ಡ ಸವಾಲಾಗಿದೆ ಎಂದರು.

ಸುರಂಗ ನಿರ್ಮಾಣ ಕಾರ್ಯದಲ್ಲಿ ತಳಮಟ್ಟದಲ್ಲಿ ಅಂದರೆ ಸುರಂಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಈ ವಲಯದ ನಿಜವಾದ ಆಸ್ತಿ. ಅನಂತರದಲ್ಲಿ ಬರುವುದು ತಂತ್ರಜ್ಞಾನ. ಈ ಎರಡೂ ಆಸ್ತಿಗಳನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಎಂಜಿನಿಯರ್‌ಗಳ ಮೇಲಿದೆ ಎಂದು ಕಿವಿಮಾತು ಹೇಳಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ. ಭವಿಷ್ಯದಲ್ಲೂ ಈ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಿರ್ಮಾಣ್‌-2022 ಸಂಘಟನಾ ಸಮಿತಿ ಅಧ್ಯಕ್ಷ ಬಿ.ಎ. ಮಧುಕರ್‌, ಸಮ್ಮೇಳನ ಅಧ್ಯಕ್ಷ ಟಿ.ಎಸ್‌. ಗುರುರಾಜ್‌, ಪ್ರಧಾನ ಕಾರ್ಯದಶಿ ಎಂ. ರವಿಶಂಕರ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ರೈಲ್ವೆ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ಮೆಂಟ್‌ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಅಮಿತ ಗರ್ಗ್‌ ಸೇರಿದಂತೆ ಇತರೆ ನಿರ್ಮಾಣ ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುರಂಗ ಮಾರ್ಗ; ಮಣ್ಣಿನ ಗುಣ ಅರಿವಿನ ಕೊರತೆ :

ಸುರಂಗ ಕೊರೆಯುವ ಕಾರ್ಯಕ್ಕೆ ಕೈಹಾಕುವ ಮುನ್ನ ಮಣ್ಣಿನ ಗುಣಧರ್ಮ ಅರಿವಿನ ಕೊರತೆಯೇ ಎಂಜಿನಿಯರ್‌ಗಳ ಪ್ರಮುಖ ಸಮಸ್ಯೆಯಾಗಿದ್ದು, ಇದು ಸುರಂಗ ಕಾಮಗಾರಿಯ ವಿಳಂಬದಲ್ಲಿ ಪರಿಣಮಿಸುತ್ತಿದೆ ಎಂದು ಗುರ್‌ಗಾಂನ ಟನೆಲಿಂಗ್‌ ಎಂಜಿನಿಯರ್‌ ತಜ್ಞ ಡಾ.ಮನೋಜ್‌ ವರ್ಮನ್‌ ತಿಳಿಸಿದರು.

ನಿರ್ಮಾಣ-2022 ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಗುರುವಾರ ಸುರಂಗ ಕೊರೆಯಲು ಇರುವ ಸವಾಲುಗಳ ಕುರಿತು ಮಾತನಾಡಿದ ಅವರು,  ಕೆಲ ಅನುಭವಿ ಎಂಜಿನಿಯರ್‌ಗಳು ಹಿಮಾಲಯದಲ್ಲೇ ಸುರಂಗ ಕಾಮಗಾರಿ ಯಶಸ್ವಿಯಾಗಿ ಪೂರೈಸಿದ ನನಗೆ ಇದು ಯಾವ ಲೆಕ್ಕ ಎಂಬ ಉದಾಸೀನ ಮಾಡುತ್ತಾರೆ. ಇನ್ನು ಹಲವರು ಮಣ್ಣಿನ ಗುಣಧರ್ಮವನ್ನು ತಿಳಿಯುವಲ್ಲಿ ಎಡವುತ್ತಾರೆ. ಕೆಲವು ಸಲ ಮಣ್ಣಿನ ಗುಣ ಅರಿತಿದ್ದರೂ, ಲೆಕ್ಕಾಚಾರ ಉಲ್ಟಾ ಆಗುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next