ಚಿತ್ರದುರ್ಗ: “ಮಳೆ ಆಗಿದೆಯೇನಮ್ಮ, ಬಿತ್ತನೆ ಮಾಡಿದ್ದಿರಾ..” ಸರ್ಕಾರಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಜತೆಗಿನ ಸಂವಾದದಲ್ಲಿ ಯಡಿಯೂರಪ್ಪ ಅವರ ಜತೆ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ವಸಂತಕುಮಾರಿ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇಳಿದ ಮಾತುಗಳಿವು.
ಲಾಕ್ ಡೌನ್ ಸಂದರ್ಭದಲ್ಲಿ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಇಲ್ಲ. ಯಾರೂ ಖರೀದಿ ಮಾಡುತ್ತಿಲ್ಲ. ಈರುಳ್ಳಿ ಕೊಳೆತು ಹೋಗುತ್ತಿದೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ವಸಂತಕುಮಾರಿ ಅವರು ಮುಖ್ಯಮಂತ್ರಿ ಜತೆ ಮಾತನಾಡಿದರು.
ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದ ನನ್ನ ವಿಡಿಯೋ ನೋಡಿ ಖುದ್ದು ನೀವೇ ಪೋನ್ ಮಾಡಿ ಸಮಸ್ಯೆ ಆಲಿಸಿ ಈರುಳ್ಳಿ ಮಾರಾಟ ಆಗುವಂತೆ ಮಾಡಿದ್ದಿರಿ. ನಿಜವಾಗಿಯೂ ನೀವು ರೈತ ನಾಯಕ ಎನ್ನುವುದನ್ನು ಸಾಬೀತು ಮಾಡಿದ್ದಿರಿ ಎಂದು ಧನ್ಯವಾದ ಸಲ್ಲಿಸಿದರು.
ಇದೇ ವೇಳೆ ಹಿರಿಯೂರು ತಾಲೂಕಿನ ನೀರಾವರಿ ಸಮಸ್ಯೆ ಬಗೆಹರಿಸಿ, ನಮ್ಮ ಶಾಸಕರಿಗೆ ಸ್ಪಂದಿಸಿ ಎಂದು ಮಹಿಳೆ ಮನವಿ ಮಾಡಿಕೊಂಡರು.
ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಮಳೆ ಬಂದಿದೆಯೇನಮ್ಮ, ಬಿತ್ತನೆ ಮಾಡಿದ್ದಿರಾ. ನೀರಾವರಿ ಸಮಸ್ಯೆ ಏನಿದೆ ಅದನ್ನು ನಾನು ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದರು.