ಬೆಂಗಳೂರು: ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿ. ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಾವು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
74ನೇ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣಗೈದು ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆ ಭರವಸೆಯ ಹೊಂಗಿರಣವಾಗಿದೆ. ಪ್ರಧಾನಿ ಮೋದಿಯವರ ಆಶಯದಂತೆ ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಲು ಕರ್ನಾಟಕವು ದಿಟ್ಟ ಹೆಜ್ಜೆಯನ್ನಿಡುತ್ತಿದೆ ಎಂದರು.
ಕೋವಿಡ್ ಆರೋಗ್ಯ ಕ್ಷೇತ್ರ ಅಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳನ್ನು ಕಾಡಿದೆ. ಲಾಕ್ ಡೌನ್ ಕಾಲದಲ್ಲಿ ಮಂದಗತಿಗೆ ತೆರಳಿದ್ದ ನಮ್ಮ ಜೀವನ ಇಂದು ಚೇತರಿಸಿಕೊಳ್ಳುತ್ತಿದೆ. ನಾನು ಸಹ ಕೋವಿಡ್ ಸೋಂಕಿನಿಂದ ಬಾಧಿತನಾಗಿ, ಇದೀಗ ವೈದ್ಯಕೀಯ ಶುಶ್ರೋಷೆಯಿಂದ ಗುಣಮುಖನಾಗಿದ್ದೇನೆ. ನನ್ನ ಜನರು ಈ ಸೋಂಕಿನ ಬಗ್ಗೆ ಆತಂಕ ಅಥವಾ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಜೀವನ ನಡೆಸಬೇಕು ಎಂಬ ಸಂದೇಶವನ್ನು ಸಿಎಂ ನೀಡಿದ್ದಾರೆ.
ಪಿಪಿಇ ಕಿಟ್ ಉತ್ಪಾದನೆಯಿಂದ ಹಿಡಿದು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡುವುದು, ಸೌರ ವಿದ್ಯುತ್, ಆಟೋ ಮೊಬೈಲ್ ವಿವಿಧ ವಲಯಗಳಲ್ಲಿ ಸ್ವಾಲಂಬನೆಯ ಗುರಿ ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಎಂ ಬಿಎಸ್ ವೈ ಹೇಳಿದರು.
ಶತಮಾನಗಳ ನಂತರ ಕಾನೂನಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆ.5 ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ್ದಾರೆ. ರಾಜ್ಯದ ಯಾತ್ರಿಕರಿಗಾಗಿ ಆಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಿಸಲಾಗುವುದು ಎಂದು ಸಿಎಂ ಹೇಳಿದರು.