ಹೊಸದಿಲ್ಲಿ : “ಸೋಮವಾರದಿಂದ ಒಂದು ವಾರದವರೆಗೆ ಶಾಲೆಗಳನ್ನು ಭೌತಿಕವಾಗಿ ಮುಚ್ಚಲಾಗುವುದು; ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡುವ ಅಗತ್ಯವಿಲ್ಲ’ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಗುಣಮಟ್ಟದ ಪರಿಸ್ಥಿತಿಯ ಕುರಿತು ತುರ್ತು ಸಭೆಗೆ ನಂತರ ದೆಹಲಿ ಸಿಎಂ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದ್ದು,ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಭೌತಿಕವಾಗಿ ಮುಚ್ಚಲಿವೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳು ಒಂದು ವಾರದವರೆಗೆ 100% ಸಾಮರ್ಥ್ಯದಲ್ಲಿ ಮನೆಯಿಂದಲೇ (WFH) ಕಾರ್ಯನಿರ್ವಹಿಸುತ್ತವೆ. ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್ ಆಯ್ಕೆಗೆ ಹೋಗಲು ಖಾಸಗಿ ಕಚೇರಿಗಳಿಗೆ ಸಲಹೆಯನ್ನು ನೀಡಲಾಗುತ್ತಿದೆ ಎಂದರು.
ನವೆಂಬರ್ 14 ರಿಂದ 17 ರ ನಡುವೆ ನಿರ್ಮಾಣ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಸಿಎಂ ತಿಳಿಸಿದರು.
ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ‘ತುರ್ತು ಪರಿಸ್ಥಿತಿ’ ಎಂದು ಸುಪ್ರೀಂ ಕೋರ್ಟ್ ಘೋಷಿಸಿ, ರಾಜಧಾನಿಯಲ್ಲಿ ಲಾಕ್‌ಡೌನ್ ಅನ್ನು ಹೇರಲು ಸೂಚಿಸಿದ ನಂತರ ದೆಹಲಿ ಸರ್ಕಾರಗಳ ಈ ಕ್ರಿಯಾ ಯೋಜನೆಗಳನ್ನು ಜಾರಿ ಗೊಳಿಸುತ್ತಿದೆ.