ಚಿತ್ರದುರ್ಗ: ತಾಲೂಕಿನ ಹತ್ತು ಕೆರೆಗಳಿಗೆ ನೀರು ತುಂಬಿಸುವುದು ಹಾಗೂ 173 ಹಳ್ಳಿಗಳಿಗೆ ವಿವಿ ಸಾಗರದಿಂದ ಕುಡಿಯುವ ನೀರು ಸರಬರಾಜು ಮಾಡುವ ಎರಡು ಯೋಜನೆಗಳಿಗೆ ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲು ಹತ್ತು ಕೆರೆಗಳು ಬಿಟ್ಟು ಹೋಗಿದ್ದವು. ಇದಕ್ಕಾಗಿ ಹಲವು ದಿನಗಳಿಂದ ಮನವಿ ಮಾಡುತ್ತಾ ಬಂದಿದ್ದೆವು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದ್ದಾರೆ ಎಂದರು.
ಮುರುಘಾ ಮಠದ ಹಿಂದೆ ಮತ್ತು ಮುಂದಿನ ಎರಡು ಕೆರೆಗಳು, ಸಿದ್ದಾಪುರ, ಮಾನಂಗಿ, ಕಾಟೀಹಳ್ಳಿ, ಹುಲ್ಲೂರು, ಅನ್ನೇಹಾಳ್, ನಂದಿಪುರ, ಕುರುಮರಡಿಕೆರೆ ಹಾಗೂ ಚಿಕ್ಕಸಿದ್ದವ್ವನಹಳ್ಳಿ ಕೆರೆಗಳಿಗೆ, ಈಗಾಗಲೇ ನಮ್ಮ ತಾಲೂಕಿಗೆ ಮೀಸಲಾಗಿರುವ ನೀರಿನಲ್ಲೇ ಈ ಕೆರೆಗಳಿಗೂ 0.36 ಟಿಎಂಸಿ ಅಡಿ ನೀರು ಹರಿಸಲಾಗುವುದು ಎಂದು ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ್ ಮಾತನಾಡಿ, ಹೊಳಲ್ಕೆರೆ ತಾಲೂಕಿನ ತಾಳ್ಯ ಏತ ನೀರಾವರಿ ಮಾದರಿಯಲ್ಲಿ ಹತ್ತು ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ತಾಲೂಕಿನ ಸುಲ್ತಾನಿಪುರ, ಕಾತ್ರಾಳು, ಯಳಗೋಡು, ಮುದ್ದಾಪುರ ಕೆರೆಗಳು ಈಗಾಗಲೇ ಯೋಜನೆಯಲ್ಲಿ ಸೇರಿದ್ದವು. ಆದರೆ, ಕಾಲುವೆ ಮೇಲ್ಭಾಗದಲ್ಲಿ ಬರುವ ಹತ್ತು ಕೆರೆಗಳು ಕೈ ಬಿಟ್ಟು ಹೋಗಿದ್ದವು. ತುಂಗಭದ್ರಾ ಏತ ನೀರಾವರಿ ಯೋಜನೆಯಡಿ ಕಾತ್ರಾಳು ಕೆರೆಗೆ ನೀರು ಬರುತ್ತದೆ. ಇಲ್ಲಿ ಉಳಿಕೆಯಾಗುವ ನೀರಿನಿಂದ ಇತರೆ ಕೆರೆಗಳಿಗೆ ನೀರು ಹರಿಯಲಿದೆ ಎಂದರು. ಜಗಳೂರು ಶಾಖಾ ಕಾಲುವೆ ಮೂಲಕ ಕಾತ್ರಾಳು ಕೆರೆಗೆ ನೀರು ತಂದು ಅಲ್ಲಿಂದ ಸಮುದ್ರ ಮಟ್ಟದಿಂದ 830 ಮೀ.ಎತ್ತರವಿರುವ ಈಚಲನಾಗೇನಹಳ್ಳಿ ಬಳಿ ಜಾಕ್ ವೆಲ್ ನಿರ್ಮಿಸಿ, ಇಲ್ಲಿಂದ ಪೈಪ್‌ಗ್ಳ ಮೂಲಕ ಹತ್ತು ಕೆರೆಗಳಿಗೆ ನೀರು ಹರಿಸುವುದು ಯೋಜನೆ. ಕಾತ್ರಾಳು ಕೆರೆಯಿಂದ ಈಚಲನಾಗೇನಹಳ್ಳಿಗೆ 8.3 ಕಿ.ಮೀ ದೂರಕ್ಕೆ ನೀರು ಪಂಪ್ ಆಗಲಿದೆ.
ಪ್ರತಿ ವರ್ಷ ಎಲ್ಲ ಕೆರೆಗಳನ್ನು ಅರ್ಧ ಭಾಗ ತುಂಬಿಸಲಾಗುವುದು ಎಂದು ಹೇಳಿದರು. 173 ಹಳ್ಳಿಗೆ ಮಾರಿಕಣಿವೆ ನೀರು: ಚಿತ್ರದುರ್ಗ ತಾಲೂಕಿನ ಹಲವು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಹೊಂದಿದ್ದವು. ಹಲವೆಡೆ ಫ್ಲೋರೈಡ್ ನೀರು ಕುಡಿದು ಜನ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಜಲಮೂಲಗಳಿಂದ ನೀರು ಹರಿಸಲು ಚಿಂತನೆ ನಡೆಸಿ ವಾಣಿವಿಲಾಸ ಸಾಗರದಿಂದ ತಾಲೂಕಿನ 173 ಹಳ್ಳಿಗೆ ನೀರು ತರುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಕಿತ ಹಾಕಿದ್ದಾರೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಪುರುಷೋತ್ತಮ ಮಾತನಾಡಿ, ನಮ್ಮ ಇಲಾಖೆ ಸರ್ವೇ ನಡೆಸಿ ಯೋಜನಾ ವರದಿ ತಯಾರಿಸಿತ್ತು. ಅದರನ್ವಯ, ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಜಾಕ್‌ವೆಲ್ ಹಾಗೂ ಎಂಬಿಟಿ ನಿರ್ಮಿಸಿ ಅಲ್ಲಿಂದ 38 ಕಿ.ಮೀ ಪೈಪ್‌ಲೈನ್ ಅಳವಡಿಸಿ ನೀರು ತರಲಾಗುವುದು ಎಂದರು. ಲಕ್ಕಿಹಳ್ಳಿ ಬಳಿ ಜಾಕ್‌ವೆಲ್, ನೀರು ಶುದ್ಧೀಕರಣ ಮಾಡಿ ಅಲ್ಲಿಂದ ಹಿರಿಯೂರು ತಾಲೂಕಿನ ಮೂಲಕ ನೀರು ಬರಲಿದೆ. ಮಾರ್ಗ ಮಧ್ಯೆ ಬರುವ ಹಲವು ಹಳ್ಳಿಗಳು ಯೋಜನೆಯಲ್ಲಿ ಸೇರಿವೆ. ಇದಕ್ಕಾಗಿ ಅಂದಾಜು 350 ಕೋಟಿ ರೂ. ಯೋಜನಾ ವೆಚ್ಚ ತಯಾರಿಸಲಾಗಿದೆ ಎಂದು ವಿವರಿಸಿದರು.