Advertisement

ಗಗನ ಗೆಳೆತನ; ಅಮಿತ್‌ ಶಾ- ಎಚ್‌ಡಿಕೆ ಒಟ್ಟಿಗೆ ಪ್ರಯಾಣ: ಸಿಎಂ ಆರೋಪ

06:00 AM Apr 30, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಬಲ ನೀಡುವ ಬಾಂಬ್‌ ಸಿಡಿಸಿದ್ದಾರೆ. “”ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವ ಬಗ್ಗೆ ನನ್ನ ಬಳಿ ದಾಖಲೆ ಇದೆ. ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ” ಎಂದಿದ್ದಾರೆ.

Advertisement

ಆದರೆ, ಮುಖ್ಯಮಂತ್ರಿಗಳ ಆರೋಪಕ್ಕೆ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “”ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಈ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅದರ ಬದಲು ದಾಖಲೆ ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದ್ದಾರೆ.

ಇದರಿಂದಾಗಿ ಮುಖ್ಯಮಂತ್ರಿಗಳ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಹೇಳಿದ್ದೇನು?: ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಅಮಿತ್‌ ಶಾ ಅವರು ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿರುವ ಬಗ್ಗೆ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಚುನಾವಣೆ ಕಾವು ಹೆಚ್ಚಿಸಿದ್ದಾರೆ.

“”ರಾಜ್ಯ ಬಿಜೆಪಿಯ ಬಿ ಟೀಂ ಜೆಡಿಎಸ್‌. ಇದೀಗ ಈ ಎರಡೂ ಪಕ್ಷಗಳು ಒಂದಾಗಿವೆ. 2008ರಲ್ಲಿ ಒಟ್ಟಿಗೆ ಇದ್ದ ಲೂಟಿಕೋರರು ಈಗ ಒಂದಾಗಿದ್ದಾರೆ.  ರೆಡ್ಡಿ ಬ್ರದರ್ ಜತೆಗೆ ಬಿಜೆಪಿ ಕೈ ಜೋಡಿಸಿದೆ” ಎಂದು ಪುನರುಚ್ಚರಿಸಿದ್ದಾರೆ.

Advertisement

ಅಮಿತ್‌ ಶಾ -ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ದೆಹಲಿಗೆ ಒಟ್ಟಾಗಿ ಪ್ರಯಾಣಿಸಿದ್ದಾರೆ. ಸಿಎಂ ಆದವರು ಬಾಯಿಗೆ ಬಂದಂತೆ ಹೇಳಿಕೆ ನೀಡುವ ಬದಲು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ನಾನು ಮತ್ತು ಅಮಿತ್‌ ಶಾ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿದ ಫೋಟೋ ಅಥವಾ ದಾಖಲೆ ನಿಮ್ಮ ಬಳಿ ಇದೆಯೇ? ತೋರಿಸಿ…
–  ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಧಮ್‌ ಇದ್ದರೆ ದಾಖಲೆ ತೋರಿಸಲಿ
ಮುಖ್ಯಮಂತ್ರಿ ಆರೋಪಕ್ಕೆ ಕೆಂಡಾಮಂಡಲರಾದ ಸಂಸದೆ ಶೋಭಾ ಕರಂದ್ಲಾಜೆ, “”ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿ ಆಗಿದ್ದಾರಲ್ಲ. ಗುಪ್ತಚರ ಇಲಾಖೆ ಅವರ ಕೈಯ್ಯಲ್ಲೇ ಇದೆ. ಧಮ್‌ ಇದ್ದರೆ ದಾಖಲೆ ಬಿಡುಗಡೆ ಮಾಡಲಿ. ಹಿಟ್‌ ಅಂಡ್‌ ರನ್‌ ರೀತಿ ಬಾಯಿಗೆ ಬಂದಂತೆ ಹೇಳಿಕೆ ನೀಡಲು ಅವರು ರಾಜ್ಯದ ಮುಖ್ಯಮಂತ್ರಿ, ಸಾಮಾನ್ಯ ವ್ಯಕ್ತಿಯಲ್ಲ. ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಚುನಾವಣೆಯಂತಹ ಯುದ್ಧ ಕಾಲಕ್ಕಿಂತ ಬೇರೆ ಸೂಕ್ತ ಕಾಲ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಬಹುಮತ ಬರದಿದ್ದರೂ ನಮ್ಮದೇ ಸರ್ಕಾರ
ಮೈಸೂರು:
“”ಬಹುಮತ ಬರಬಹುದು, ಬರದೇ ಇರಬಹುದು. ಆದರೆ ಜೆಡಿಎಸ್‌ ನೇತೃತ್ವದ ಸರ್ಕಾರ ರಚನೆ ಮಾಡಿಯೇ ಮಾಡುತ್ತೇವೆ” ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ತಿರುಕನ ಕನಸು ಅಂದುಕೊಳ್ಳಬಹುದು. ನಿಖರವಾಗಿ ಜೆಡಿಎಸ್‌ ಇಷ್ಟೇ ಸ್ಥಾನ ಗೆಲ್ಲುತ್ತದೆ ಎಂದು ಹೇಳಲಾರೆ. ಆ ತೀರ್ಮಾನ ಜನತಾ ಜನಾರ್ದನನಿಗೆ ಬಿಟ್ಟದ್ದು ಎಂದರು.

ನಾಲ್ಕಾರು ಏಜೆನ್ಸಿಗಳು ಒಂದೊಂದು ರೀತಿಯ ಸಮೀಕ್ಷೆಗಳನ್ನು ಹೇಳುತ್ತಿವೆ. ಒಂದು ಏಜೆನ್ಸಿಗೆ ಜೆಡಿಎಸ್‌ಗೆ 30 ಸ್ಥಾನ ಅಂದರೆ, ಇನ್ನೊಂದು ಏಜೆನ್ಸಿ 35 ಸ್ಥಾನ, 38 ಸ್ಥಾನ ಬರುತ್ತದೆ ಅನ್ನುತ್ತಿವೆ. ಆದರೆ, ಜೆಡಿಎಸ್‌ ಈ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಬಿಎಸ್‌ಪಿ, ಪಕ್ಷೇತರ ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯವರ ಸಹವಾಸ ಮಾಡಲ್ಲ ಎಂದು ಹೇಳಿದರು.

ಜೆಡಿಎಸ್‌, ಬಿಜೆಪಿಯ ಬಿ-ಟೀಮ್‌ ಅನ್ನುವುದು ಕಾಂಗ್ರೆಸ್ಸಿಗರ ಭ್ರಮೆ. ಇವರ ಸಹವಾಸ ಬಿಟ್ಟು ಮಾಯಾವತಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌, ಓವೈಸಿ ಬೆಂಬಲ ಘೋಷಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next