Advertisement

ಅಧ್ಯಕ್ಷರಾದ್ರೆ ಸಿಎಂ ಕೈಗೊಂಬೆ ಅಗ್ತೀರಾ?

11:32 AM Apr 13, 2017 | Team Udayavani |

ರಾಜ್ಯ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಗಾದಿಗೆ ತೆರೆ ಮರೆಯಲ್ಲಿ ಕಸರತ್ತು ನಡೆದಿದೆ. ಹಾಲಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಮುಂದುವರಿಯಲು ಕಸರತ್ತು ನಡೆಸುತ್ತಿದ್ದರೆ, ಮೊದಲಿನಿಂದಲೂ ಆ ಹುದ್ದೆಗೇರುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆ. ಇತ್ತೀಚೆಗೆ ಸಂಸದ ಕೆ.ಎಚ್‌. ಮುನಿಯಪ್ಪ ನಾನೂ ರೇಸ್‌ನಲ್ಲಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭರವಸೆ ನೀಡಿ ಮಂತ್ರಿ ಸ್ಥಾನದಿಂದ ಕೈ ಬಿಟ್ಟಿರುವ ಎಸ್‌.ಆರ್‌. ಪಾಟೀಲ್‌ ಅಧ್ಯಕ್ಷ ಸ್ಥಾನದತ್ತ ಆಸೆಗಣ್ಣಿನಿಂದ ನೋಡುತ್ತಲೇ ಇದ್ದಾರೆ. ಎಸ್‌.ಆರ್‌. ಪಾಟೀಲ್‌ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ ಮಾಡುವವರ ವಿರುದ್ಧ ಪರೋಕ್ಷ ಚಾಟಿ ಸಹ ಬೀಸಿದ್ದಾರೆ. ಕಾಂಗ್ರೆಸ್‌ನಲ್ಲಿನ ವಿದ್ಯಮಾನಗಳ ಬಗ್ಗೆ ಎಸ್‌.ಆರ್‌. ಪಾಟೀಲ್‌ ಅವರೊಂದಿಗೆ ನೇರಾ-ನೇರ ಮಾತಿಗಿಳಿದಾಗ…..

Advertisement

ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ?
     ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಅಂತ ಯಾರ ಬಳಿಯೂ ಹೋಗಿಲ್ಲ. ಅಧ್ಯಕ್ಷ ಸ್ಥಾನ ಅನ್ನುವುದು ಮಹತ್ವದ ಹುದ್ದೆ. ಅದನ್ನು ಲಾಬಿ ಮಾಡಿ ಪಡೆಯುವುದು ಸರಿಯಲ್ಲ. ಸರ್ಕಾರದಲ್ಲಿ 33 ಜನ ಮಂತ್ರಿಗಳಿರುತ್ತಾರೆ. ಆದರೆ, ಪಕ್ಷಕ್ಕೆ ರಾಜ್ಯದಲ್ಲಿ ಒಬ್ಬರೇ ಅಧ್ಯಕ್ಷರು. ಅದು ಮಹತ್ವದ ಸ್ಥಾನ. 
ಆ ಸ್ಥಾನವನ್ನು ಈ ಸಂದರ್ಭದಲ್ಲಿ ಯಾರಿಗೆ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಅನುಕೂಲವಾಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ.

ಅಂದ್ರೆ, ಲಾಬಿ ಮಾಡಬಾರದು ಅಂತಾನಾ?
     ಹಾಗಲ್ಲ, ಲಾಬಿ ಮಾಡೋರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಕಷ್ಟ ಆಗುತ್ತದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಅನಿವಾರ್ಯತೆ ಇದೆ. ಅದು ಸಾಕಾರಗೊಳ್ಳಬೇಕೆಂದರೆ, ಸಮರ್ಥ, ಸಮುದಾಯ, ಪ್ರಾದೇಶಿಕತೆ ಆಧಾರದಲ್ಲಿ ನೇಮಿಸಿದರೆ ಅನುಕೂಲ ಆಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈಗಿನ ಪರಿಸ್ಥಿತಿಯಲ್ಲಿ ಹೈ ಕಮಾಂಡ್‌ ಕರ್ನಾಟಕದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ. 

ನಿಮ್ಮನ್ನು ಮಂತ್ರಿ ಸ್ಥಾನದಿಂದ ಕೈ ಬಿಡುವಾಗ ಕೆಪಿಸಿಸಿ ಅಧ್ಯಕ್ಷ ಗಾದಿಯ ಭರವಸೆ ಕೊಡಲಾಗಿತ್ತಾ?
     ನಾನು ಮಂತ್ರಿಯಾಗಿದ್ದಾಗಲೇ ಮುಖ್ಯಮಂತ್ರಿಗಳು ನೀವು ಅಧ್ಯಕ್ಷರಾದರೆ, ಮಂತ್ರಿ ಸ್ಥಾನ ಬಿಡಬೇಕಾಗುತ್ತದೆ ಅಂತ ಹೇಳಿದ್ದರು. ಸಚಿವ ಸ್ಥಾನದಿಂದ ಕೈ ಬಿಟ್ಟಾಗಲೂ ಪಕ್ಷದಲ್ಲಿ ಬೇರೆ ಕೆಲಸಗಳಿಗೆ ನಿಮ್ಮನ್ನು ಬಳಸಿಕೊಳ್ಳುತ್ತೇನೆ. ನಿಮ್ಮ ವಿರುದ್ಧ ಆರೋಪ ಇಲ್ಲ. ಉತ್ತಮವಾಗಿ ಕೆಲಸ ಮಾಡ್ತಿದಿರಾ ಅಂತ ಹೇಳಿದರು. ನಾನು ಸಚಿವ ಸ್ಥಾನಕ್ಕೆ ಅಂಟಿಕೊಂಡು ಕೂತವನಲ್ಲ, ಸಚಿವ ಸ್ಥಾನ ಅನ್ನೋದು ನಮ್ಮಪ್ಪನ ಆಸ್ತಿಯೂ ಅಲ್ಲ. ಸಂಪುಟದಿಂದ ಕೈ ಬಿಡುವುದು ಮುಖ್ಯಮಂತ್ರಿಯ ಪರಮಾಧಿಕಾರ, ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಅದಕ್ಕೆ ನಾನು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಅವರು ನನಗೆ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. 

ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವ ಸಾಮರ್ಥ್ಯ ಇದೆಯಾ?
     ನನ್ನನ್ನ ಅಧ್ಯಕ್ಷನನ್ನಾಗಿ ಮಾಡಿ ನೋಡಲಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಗೋಡೇ ಬರಹದಷ್ಟೇ ಸತ್ಯ. 40 ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕಾಂಗ್ರೆಸ್‌ನ ಎಲ್ಲ ಒಳ ಹೊರಗೂ ಏನಿದೆ ಅಂತ ಗೊತ್ತಿದೆ. ಕೆಲವರು ಅಧಿಕಾರಕ್ಕಾಗಿ ಇಲ್ಲಿ ಬಂದು ಅಧಿಕಾರ ಪಡೆದಿದ್ದಾರೆ. ನಾನು ಯಾವುದೇ ಅಧಿಕಾರಕ್ಕೂ ಬೆನ್ನು ಬೀಳದೆ ಪಕ್ಷದ ಸಿದ್ಧಾಂತ ನಂಬಿ ಇಲ್ಲಿಯೇ ಇದ್ದೇನೆ. ನಾನು ಪ್ರಾಮಾಣಿಕತೆ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದೇನೆ. ಐಟಿ ಬಿಟಿ ಮಂತ್ರಿಯಾಗಿದ್ದಾಗಲೂ ಬೆಂಗಳೂರಿನ ಬ್ರಾಂಡ್‌ಗೆ ಧಕ್ಕೆ ಬರದಂತೆ ಕೆಲಸ ಮಾಡಿದ್ದೇನೆ. ಮೇಲ್ಮನೆಯಲ್ಲಿ ಸಭಾ ನಾಯಕನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. 

Advertisement

ಪರಮೇಶ್ವರ್‌ ಅಧ್ಯಕ್ಷರಾಗಿ ಮುಂದುವರೆಯಲು ಬಯಸುತ್ತಿದ್ದಾರೆ, ಡಿ.ಕೆ.ಶಿವಕುಮಾರ್‌, ಕೆ.ಎಚ್‌.ಮುನಿಯಪ್ಪ ಸಹ ರೇಸ್‌ನಲ್ಲಿದ್ದಾರೆ? 
     2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕಾದರೆ, ಯಾರ ನಾಯಕತ್ವ ಅಗತ್ಯ ಇದೆ ಅಂತ ಕಾಂಗ್ರೆಸ್‌ ಹೈ ಕಮಾಂಡ್‌, ಸೋನಿಯಾ ಗಾಂಧಿ ಹಾಗೂ ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ. 

ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ ಎಂಬ ಮಾತಿದೆಯಲ್ಲಾ?
      ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ ಎನ್ನುವ ಭಾವನೆಯೇ ತಪ್ಪು. ಕಾಂಗ್ರೆಸ್‌ ಪಕ್ಷ ಲಿಂಗಾಯತ ಸಮುದಾಯದವರಿಗೆ ಸಾಕಷ್ಟು ಸ್ಥಾನ ಮಾನ ಕೊಟ್ಟಿದೆ. ಈಗಿನ ಸರ್ಕಾರದಲ್ಲಿಯೂ ಲಿಂಗಾಯತ ಸಮುದಾಯದವರೇ ಪ್ರಭಾವಿ ಖಾತೆಗಳನ್ನು ಹೊಂದಿರುವ ಸಚಿವರಿದ್ದಾರೆ. ಬಿಜೆಪಿಯವರು ವೀರಶೈವ ಸಮುದಾಯಕ್ಕೆ ಏನೂ ಕೊಟ್ಟಿಲ್ಲಾ. ಕೇಂದ್ರದಲ್ಲಿ ಒಂದೂ ಮಂತ್ರಿ ಸ್ಥಾನ ನೀಡಿಲ್ಲ. ಇರುವ ಒಂದು ಮಂತ್ರಿ ಸ್ಥಾನವನ್ನೂ ಕಿತ್ತುಕೊಂಡಿದ್ದಾರೆ. ಬಿಜೆಪಿಯವರು ಲಿಂಗಾಯತರಿಗೆ ಗೌರವ ಕೊಡ್ತಾರೆ ಅಂದ್ರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ವೀರಶೈವರಿಗೆ ಕೊಡಲಿ ನೋಡೋಣ. 

ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಗೌರವ ಇಲ್ಲ ಅಂತ ಆ ಸಮುದಾಯದ ಶಾಸಕರು ಬಿಜೆಪಿ ಕಡೆ ಹೋಗ್ತಿದಾರಲ್ಲಾ?
      ಶುದ್ದ ಸುಳ್ಳು. ಲಿಂಗಾಯತ ಶಾಸಕರಾರೂ ಬಿಜೆಪಿ ಕಡೆಗೆ ಹೋಗುತ್ತಿಲ್ಲ. ನಿಜವಾದ ವೀರಶೈವರು ಬಿಜೆಪಿಗೆ ಹೋಗುವುದಿಲ್ಲ. ಯಾಕಂದರೆ, ಬಿಜೆಪಿ ಜಾತೀಯ ಪಕ್ಷ. ಅಲ್ಲಿ ವೀರಶೈವ ತತ್ವಗಳಿಗೆ ಬೆಲೆ ಇಲ್ಲ. ಕಾಂಗ್ರೆಸ್‌ ನಿಜವಾದ ವೀರಶೈವ ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನ ಸಿದ್ಧಾಂತಕ್ಕೂ ಕಾಂಗ್ರೆಸ್‌ ಸಂವಿಧಾನಕ್ಕೂ ಹೋಲಿಕೆ ಇದೆ. ಲಿಂಗಾಯತರು ಜಾತಿ ರಾಜಕಾರಣ ಮಾಡುವುದಿಲ್ಲ. “ಮಾದರ ಚೆನ್ನಯ್ಯನ ದಾಸಿಯ ಮಗ, ದೋಹರ ಕಕ್ಕಯ್ಯನ ದಾಸಿಯ ಮಗಳು ಬೆರಣಿಗೆ ಹೋದಾಗ ಅವರ ಸಂಬಂಧದಲಿ ಹುಟ್ಟಿದವನು ನಾನು’ ಅಂತ ಹೇಳಿರುವ ಬಸವಣ್ಣನವರ ಸಮುದಾಯದಲ್ಲಿ ಹುಟ್ಟಿದವರು ನಾವು. 

ಕಾಂಗ್ರೆಸ್‌ ಸರ್ಕಾರದಲ್ಲಿ ಅಹಿಂದ ವರ್ಗಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆಯಂತೆ?
      ವಿಶ್ವ ಮಾನವ ಬಸವಣ್ಣನವರು ಹುಟ್ಟಿದ ದಿನ ಅಧಿಕಾರಕ್ಕೆ ಬಂದ ಸರ್ಕಾರ ನಮ್ಮದು. ಕೆಳ ಸಮುದಾಯದವರನ್ನು ಮೇಲಕ್ಕೆ ತರುವುದು ಜಾತಿ ಮಾಡಿದಂತಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಯೋಜನೆಗಳು ಯಾವುದೇ ಸಮುದಾಯಕ್ಕೆ ಮೀಸಲಾಗಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂತ ತುಳಿತಕ್ಕೊಳಗಾದವರಿಗೆ ಅನ್ನ ಹಾಕುವುದು ಧರ್ಮದ ಕಾರ್ಯ. ಕೃಷ್ಣಾ  ಮೇಲ್ದಂಡೆ ಯೋಜನೆ ನೀರಾವರಿಗೆ ನಮ್ಮ ಸರ್ಕಾರ 50 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಿದೆ. ಅಲ್ಲಿ ಯಾವ ಸಮುದಾಯದ ಜನ ಹೆಚ್ಚಿದ್ದಾರೆ?(ಲಿಂಗಾಯತರು) ಅವರಿಗೆ ಅನುಕೂಲ ಆಗಿಲ್ಲವೇ ? ಲಿಂಗಾಯತರನ್ನು ದೂರ ಇಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರ.

ನೀವು ಅಧ್ಯಕ್ಷರಾದರೆ, ಸಿದ್ದರಾಮಯ್ಯ ಕೈಗೊಂಬೆ ಆಗ್ತಿàರಿ ಅಂತಾರೆ? 
     ನಾನು ಯಾರ ಕೈಗೊಂಬೆಯಾಗಿಯೂ ಕಾರ್ಯ ನಿರ್ವಹಿಸುವುದಿಲ್ಲ. ನಾನು ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತೇನೆ. ನನ್ನ ತತ್ವ ಸಿದ್ಧಾಂತಕ್ಕೆ ಚ್ಯುತಿ ಬಂದರೆ, ಕುರ್ಚಿ ಬಿಡಲು ಸಿದ್ಧನಿದ್ದೇನೆ. ಪಕ್ಷದಲ್ಲಿನ ಎಲ್ಲ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ನನ್ನಲ್ಲಿದೆ. 

ನಿಮಗೆ ಪರಿಷತ್‌ ಸಭಾಪತಿ ಸ್ಥಾನ ನೀಡ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ?
     ನಾನು ಮಂತ್ರಿ ಸ್ಥಾನಕ್ಕಾಗಿ ಕಾದು ಕೂತಿಲ್ಲ. ಅದು ಸಿಗುತ್ತದೆ ಎನ್ನುವ ನಂಬಿಕೆಯೂ ನನಗಿಲ್ಲ. ನನಗೆ ಮಂತ್ರಿ ಸ್ಥಾನ ನೀಡಿ ಅಂತ ಯಾರ ಬಳಿಯೂ ಹೋಗಿ ಕೈ ಚಾಚುವುದಿಲ್ಲ. ಮುಖ್ಯಮಂತ್ರಿಗಳು ಪಕ್ಷದ ಬೇರೆ ಕೆಲಸಗಳಲ್ಲಿ ನನ್ನನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದರಂತೆ ಕೆಲಸ ಮಾಡುತ್ತೇನೆ. ಸಭಾಧ್ಯಕ್ಷರ ಹುದ್ದೆ ಊಹಾಪೋಹ. ಆ ಬಗ್ಗೆ ಉತ್ತರಿಸಲ್ಲ.

2018 ಚುನಾವಣೆಯಲ್ಲಿ ನಿಮ್ಮ ಪ್ರಕಾರ ಏನಾಗಬಹುದು?
     ನಾನು ಅಧ್ಯಕ್ಷನಾದರೆ, ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆಯುವುದು ಸ್ಪಷ್ಟ. ಬಿಜೆಪಿಯವರು ಮಿಷನ್‌ 150 ಅಂತ ಹಗಲು ಕನಸು ಕಾಣುತ್ತಿದ್ದಾರೆ. ಅವರ ಪಕ್ಷದಲ್ಲಿನ ಕಚ್ಚಾಟ ನೋಡಿದರೆ, ಉಪ ಚುನಾವಣೆಯಲ್ಲಿಯೂ ಗೆಲ್ಲುವುದಿಲ್ಲ. ನಮ್ಮಲ್ಲಿ ಎಲ್ಲ ನಾಯಕರಲ್ಲಿಯೂ ಒಗ್ಗಟ್ಟಿದೆ. ಹೀಗಾಗಿ ನಾವು ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. 

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾತುಗಳು ಕೇಳಿಬರುತ್ತಿವೆಯಲ್ಲ?
    ಹೊಂದಾಣಿಕೆ ಮಾಡಿಕೊಂಡು ಹೋಗೋದು ತಪ್ಪಲ್ಲ. ಹೊಂದಾಣಿಕೆ ಇಲ್ಲದಿದ್ದರೆ ಗಂಡ ಹೆಂಡತಿ ಸಂಸಾರಾನೆ ನಡಿಯೊಲ್ಲ. ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗುಣ ನನಗೆ ಹುಟ್ಟಿನಿಂದಲೂ ಇದೆ. ಹೊಂದಾಣಿಕೆಯ ಅಗತ್ಯ ಬರುವುದಿಲ್ಲ ಎಂಬ ನಂಬಿಕೆ ನನ್ನದು. 

ಕಾಂಗ್ರೆಸ್‌ನಲ್ಲಿ ಹಿರಿಯರಿಗೆ ಗೌರವ ಸಿಗ್ತಿಲ್ಲ ಅಂತ ದೂರಿದೆ. ಎಸ್‌.ಎಂ.ಕೃಷ್ಣ ಪಕ್ಷಾನೆ ಬಿಟ್ಟು ಹೋದರಲ್ಲಾ?
     ಪಕ್ಷದಲ್ಲಿ ಹಿರಿಯರಿಗೆ ಸಿಗಬೇಕಾದ ಗೌರವ ಸಿಗಬೇಕು. ಈಗಲೂ ಸಿಗುತ್ತಿದೆ. ಎಸ್‌.ಎಂ. ಕೃಷ್ಣ ಅವರು ರಾಜ್ಯದಲ್ಲಿ ಯಾವ ನಾಯಕರೂ ಅನುಭವಿಸದಷ್ಟು ಹುದ್ದೆಗಳನ್ನು ಅನುಭವಿಸಿ, ಪಕ್ಷ ಬಿಟ್ಟು ಹೋಗುತ್ತಾರೆಂದರೆ, ಅವರ ಬದ್ಧತೆಗೆ ಏನು ಹೇಳುವುದು? ಕೆಲವರು ಎಂಆರ್‌ಪಿ (ಮೆಂಬರ್‌ ಆಫ್ ರೂಲಿಂಗ್‌ ಪಾರ್ಟಿ)ಗಳು ಇರ್ತಾರೆ. ಇವರು ಎಂಆರ್‌ಪಿ ಲಿಸ್ಟ್‌ಗೆ ಸೇರಿದಾರೆ. ಜಾಫ‌ರ್‌ ಷರೀಫ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಮೋಹನ್‌ ಭಾಗವತ್‌ಗೆ ರಾಷ್ಟ್ರಪತಿ ಸ್ಥಾನಕ್ಕೆ ಬೆಂಬಲ ಸೂಚಿಸಿದ್ದು ಅವರ ವೈಯಕ್ತಿಕ ಅಭಿಪ್ರಾಯ. 

ಉಪ ಚುನಾವಣೆಯ ಫ‌ಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿಯಾಗುತ್ತಾ?
     ಉಪ ಚುನಾವಣೆಯ ವಿಷಯವೇ ಬೇರೆ, ಅದು ಸಾಮಾನ್ಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಚುನಾವಣೆಯಲ್ಲಿ ಸೋತ ತಕ್ಷಣ ಯಾವ ನಾಯಕರ ನಾಯಕತ್ವವೂ ಕುಸಿದು ಹೋಗುವುದಿಲ್ಲ.

ಯಡಿಯೂರಪ್ಪಗಿಂತ ಬಲಿಷ್ಠವಾಗಿ ಪಕ್ಷಕಾಣುತ್ತೇನೆ
     ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಯಡಿಯೂರಪ್ಪ ಅವರಿಗಿಂತ ಹೆಚ್ಚು ಬಲಿಷ್ಠವಾಗಿ ಪಕ್ಷ ಕಟ್ಟುವ ಶಕ್ತಿ ನನ್ನಲ್ಲಿದೆ. ನಾನು ಸೌಮ್ಯ ಸ್ವಭಾವದವನಂತೆ ಕಾಣುತ್ತೇನೆ. ವಜ್ರದಷ್ಟು ಕಠಿಣ ಗುಣ ನನ್ನಲ್ಲಿಯೂ ಇದೆ. ಬಿಜೆಪಿಯವರು ವೀರಶೈವ ಸಮುದಾಯಕ್ಕೆ ಏನೂ ಕೊಟ್ಟಿಲ್ಲ. ಕೇಂದ್ರದಲ್ಲಿ ಒಂದೂ ಮಂತ್ರಿ ಸ್ಥಾನ ನೀಡಿಲ್ಲ. ಇರುವ ಒಂದು ಮಂತ್ರಿ ಸ್ಥಾನವನ್ನೂ ಕಿತ್ತುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಎಸ್‌. ನಿಜಲಿಂಗಪ್ಪ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಎಸ್‌. ಆರ್‌. ಕಂಠಿ, ಬಿ.ಡಿ. ಜತ್ತಿ, ವಿರೇಂದ್ರ ಪಾಟೀಲ್‌ ಅವರನ್ನು ಮುಖ್ಯಮಂತ್ರಿ ಮಾಡಿದೆ.

ಲಿಂಗಾಯತ ಶಾಸಕರಾರೂ ಬಿಜೆಪಿ ಕಡೆಗೆ ಹೋಗುತ್ತಿಲ್ಲ. ನಿಜವಾದ ವೀರಶೈವರು ಬಿಜೆಪಿಗೆ ಹೋಗುವುದಿಲ್ಲ. ಯಾಕೆಂದರೆ, ಬಿಜೆಪಿ ಜಾತೀಯ ಪಕ್ಷ. ಅಲ್ಲಿ ವೀರಶೈವ ತಣ್ತೀಗಳಿಗೆ ಬೆಲೆ ಇಲ್ಲ. ಕಾಂಗ್ರೆಸ್‌ ನಿಜವಾದ ವೀರಶೈವ ತತ್ತದಡಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನ ಸಿದ್ಧಾಂತಕ್ಕೂ ಕಾಂಗ್ರೆಸ್‌ ಸಂವಿಧಾನಕ್ಕೂ ಹೋಲಿಕೆ ಇದೆ. ಲಿಂಗಾಯತರು ಜಾತಿ ರಾಜಕಾರಣ ಮಾಡುವುದಿಲ್ಲ. 
– ಎಸ್‌. ಆರ್‌. ಪಾಟೀಲ್‌
ಕಾಂಗ್ರೆಸ್‌ ನಾಯಕ

 ಸಂದರ್ಶನ: ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next