ಉಡುಪಿ: ಸರಕಾರಿ ಶಾಲಾ ಶಿಕ್ಷಕರಲ್ಲಿ ಜ್ಞಾನ, ತಿಳುವಳಿಕೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿ ಕ್ಲಸ್ಟರ್‌ಗಳಲ್ಲೂ ಸಭೆ ನಡೆಸಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಸೂಚನೆ ನೀಡಿದೆ.
ಅಜೀಂ ಪ್ರೇಮ್‌ಜಿ ಫೌಂಡೇಶನ್ ಅವರು ರೂಪಿಸಿರುವ ಪ್ರಾತ್ಯಕ್ಷಿಕೆ ಹಾಗೂ ವಿಷಯವಾರು ಪಡಲಾಂಗ್ ನೋಟ್‌ಆಧಾರದಲ್ಲಿ ಪೈಲಟ್ ಸ್ಟಡಿ ನಡೆಸಲಾಗಿದ್ದು, ಈ ವಿಧಾನವು ಶಿಕ್ಷಕರ ಬೋಧನೆಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕ್ಲಸ್ಟರ್ ಸಭೆಯನ್ನು ಸಿಆರ್‌ಪಿ, ಬಿಆರ್‌ಪಿ, ಇಸಿಒ, ಬಿಆರ್‌ಸಿ, ಬಿಸಿಒ, ಡಯಟ್ ಹಾಗೂ ಡಿಡಿಪಿಐ ಕಚೇರಿಯ ಅಧಿಕಾರಿಗಳನ್ನು ಅನುಷ್ಠಾನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಕ್ಲಸ್ಟರ್ ಸಭೆ ನಡೆಸುವ ಪೂರ್ವದಲ್ಲಿ ಶಿಕ್ಷಕರಿಗೆ ಯಾವ ವಿಷಯ ಅಥವಾ ಪರಿಕಲ್ಪನೆಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಪ್ರಸ್ತುತಪಡಿಸಬೇಕು ಎಂಬುದನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕು.
ಕ್ಲಸ್ಟರ್ ಸಮಾಲೋಚನ ಸಭೆಯನ್ನು 2025ರ ಜನವರಿಯವರೆಗೂ ಪ್ರತೀ ತಿಂಗಳು ನಡೆಸಬೇಕು. ಈ ಸಭೆಯಲ್ಲಿ ಬೋಧನ ಯೋಜನೆಗಳು, ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸುವ ಬಗ್ಗೆಯೂ ಸಮಗ್ರವಾಗಿ ಚರ್ಚೆ ಮಾಡಬೇಕು. ತರಗತಿ ಬೋಧನೆಗೆ ಅನುಕೂಲವಾಗುವಂತೆ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರಿಗೆ ವಿಶೇಷ ಅನುಭವ ಒದಗಿಸಬೇಕು. 1ರಿಂದ 8ನೇ ತರಗತಿಯ ಬೋಧನೆಯಲ್ಲಿ ಉತ್ತಮ ಸಾಧನೆ ತೋರಿದ ಅಥವಾ ನಿರ್ದಿಷ್ಟ ಕಾರ್ಯಸೂಚಿ ಅನುಷ್ಠಾನ ಮಾಡಿ ಯಶಸ್ಸು ಕಂಡ ಶಿಕ್ಷಕರನ್ನು ಗೌರವಿಸಬೇಕು ಎಂದು ನಿರ್ದೇಶನ ನೀಡಿದೆ.
ಮೇಲಾಧಿಕಾರಿಗಳ ಮೇಲ್ವಿಚಾರಣೆ
ಸಭೆಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು. ಸಭೆಯ ಉದ್ದೇಶವನ್ನು ಶಿಕ್ಷಕರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕು. ಶಿಕ್ಷಕರು ಸೃಜನಾತ್ಮಕ, ನಾವಿನ್ಯಯುತ ಬೋಧನೆಗೆ ಪೂರಕವಾಗುವಂತೆ ಸಭೆ ಇರಬೇಕು. ಪ್ರತೀ ಸಭೆಯೂ ಶಿಕ್ಷಕರ ಜ್ಞಾನ ಹೆಚ್ಚಿಸುವಂತಿರಬೇಕು ಮತ್ತು ಅವರನ್ನು ಆತ್ಮವಿಶ್ವಾಸವನ್ನು ಇನ್ನಷ್ಟು ತುಂಬುವಂತಿರಬೇಕು. ಫಲಿತಾಂಶ ಆಧಾರಿತವಾಗಿ ಸಭೆ ಇರಬೇಕು. ಇಲಾಖೆಯ ಮೇಲಾಧಿಕಾರಿಗಳು ಇದರ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದೆ.