ಉತ್ತರಾಖಂಡ : ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುರಿದ ಧಾರಾಕಾರ ಮಳೆಯ ನಡುವೆ ಮೇಘಸ್ಫೋಟ ಸಂಭವಿಸಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಶನಿವಾರ ಮುಂಜಾನೆ ಸುಮಾರು 2:45 ರ ಸಮಯದಲ್ಲಿ ಡೆಹ್ರಾಡೂನ್ ಜಿಲ್ಲೆಯ ಸರ್ಖೆತ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು ಸುದ್ದಿ ತಿಳಿಯುತ್ತಲೇ ರಾಜ್ಯ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ವಿಪತ್ತು ತಂಡದಿಂದ ಗ್ರಾಮದಲ್ಲಿ ಸಿಲುಕಿದ ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗ್ರಾಮಸ್ಥರನ್ನು ಸಮೀಪದ ಆಶ್ರಯ ಶಿಬಿರಕ್ಕೆ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಆಗಸ್ಟ್ 19 ಮತ್ತು 20ರಂದು ಉತ್ತರಾಖಂಡ ಮತ್ತು ಪೂರ್ವ ಉತ್ತರ ಪ್ರದೇಶದ ಮೇಲೆ ಮತ್ತು ವಾರಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಗುಡುಗು ಸಹಿತ ವ್ಯಾಪಕವಾದ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು..
ಭಾರೀ ಮಳೆಯಿಂದಾಗಿ ಡೆಹ್ರಾಡೂನ್ನ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಮ್ಸಾ ನದಿಯು ಉಕ್ಕಿ ಹರಿಯುತ್ತಿದ್ದು. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವ ಪರಿಣಾಮ ಮಾತಾ ವೈಷ್ಣೋ ದೇವಿ ದೇವಸ್ಥಾನ ಮತ್ತು ತಪಕೇಶ್ವರ್ ಮಹಾದೇವ ದೇವಸ್ಥಾನ ನಡುವಿನ ಸಂಪರ್ಕ ಕಡಿತಗೊಂಡಿದೆ.