Advertisement
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಾಗಿರುವ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಆದರೆ, ಈವರೆಗೆ ಚರ್ಚೆ ನಡೆದಿಲ್ಲ. ಕಳೆದ ವರ್ಷ ಮೋಡ ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ತಿಳಿದುಕೊಂಡು ಸಂಪುಟ ಉಪಸಮಿತಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು. ಅದೇ ರೀತಿ, 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿದ್ದು, ಅಂತಹ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಈ ಬಗ್ಗೆಯೂ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಅಗತ್ಯ ಬಿದ್ದರೆ ಮುಂದಿನ ಸಭೆಯಲ್ಲೇ ಬರಪೀಡಿತ ಜಿಲ್ಲೆಗಳನ್ನು ಘೋಷಣೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಹಾಲಿನ ದರ ಏರಿಕೆ ಕುರಿತು ಊಹಾಪೋಹಗಳು ಕೇಳಿ ಬರುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹಾಲಿನ ದರ ಏರಿಕೆ ಆಲೋಚನೆಯೂ ಇಲ್ಲ, ಆ ಕುರಿತ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. ಈ ಕುರಿತು ಆರಂಭಿಕ ಚರ್ಚೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಪದೇಪದೆ ಏರಿಕೆಯಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೇಂದ್ರ ಸರ್ಕಾರ ಯಾವ ರೀತಿ ಕೆಲಸ
ಮಾಡುತ್ತಿದೆ ಎಂಬುದು ಜನರಿಗೆ ಈಗ ಅರ್ಥವಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕನಿಷ್ಠ ರೈತರಿಗಾದರೂ ಸಬ್ಸಿಡಿ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು. ಕೊಡಗಿನಲ್ಲಿ ಜಾನುವಾರು ವಿತರಿಸಲು ಚಿಂತನೆ ಕೊಡಗಿನಲ್ಲಿ ಭಾರೀ ಪ್ರವಾಹದಿಂದ ಜಾನುವಾರುಗಳು ಮೃತಪಟ್ಟಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರದ ಬದಲು ಜಾನುವಾರುಗಳನ್ನೇ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಸಾಮಾನ್ಯವಾಗಿ ಅನಾಹುತಗಳಲ್ಲಿ ಜಾನುವಾರುಗಳು ಮೃತಪಟ್ಟಾಗ 10 ಸಾವಿರ ರೂ. ಪರಿಹಾರ ನೀಡುವ ನಿಯಮವಿದೆ. ಆದರೆ, ಕೊಡಗು ದುರಂತ ವಿಶೇಷ ಪ್ರಕರಣವಾಗಿದ್ದರಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಬೇಕೇ ಅಥವಾ ಜಾನುವಾರುಗಳನ್ನೇ ಕೊಡಬೇಕೇ ಎಂಬುದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಲ್ಲಿ ಸಾವನ್ನಪ್ಪಿದ ಜಾನುವಾರುಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ. ವರದಿ ಬಂದ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದರು.