Advertisement

Belagavi ಜಿಲ್ಲೆಯಲ್ಲಿ ನಾಳೆಯಿಂದ ಮೋಡ ಬಿತ್ತನೆ: ಸಚಿವ ಸತೀಶ್‌ ಜಾರಕಿಹೊಳಿ

05:27 PM Sep 28, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರು ಮಳೆ ತೀವ್ರ ಕೊರತೆಯಿಂದ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನ ಬೆಳಗಾಂ ಶುಗರ್ಸ್‌ನಿಂದ ಮೋಡ ಬಿತ್ತನೆ ಮಾಡಲಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಡ ಬಿತ್ತನೆಗೆ ಬಳಸುವ ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಇನ್ನು, ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲಾಗುವುದು. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ ಎಂದರು.ಮೋಡ ಬಿತ್ತನೆ ಕಾರ್ಯ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ಮೂರು ದಿನಕ್ಕಾಗುವ ಖರ್ಚು ವೆಚ್ಚವನ್ನು ಬೆಳಗಾಂ ಶುಗರ್ಸ್‌ನಿಂದ ಭರಿಸಲಾಗುವುದು ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರನ್ನು ಎಲ್ಲಾ ಸರ್ಕಾರಗಳು ಬಿಟ್ಟಿವೆ. ನಾವು ತಮಿಳುನಾಡಿನ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಈ ನಾಡು, ನುಡಿ, ಜಲವನ್ನು ಕಾಪಾಡಲು ಬದ್ದರಾಗಿದ್ದೇವೆ. ಆದರೆ ನ್ಯಾಯಾಲಯದ ಆದೇಶ ಪಾಲಿಸಲೇಬೇಕು. ಯಾವ ಯಾವ ಸರ್ಕಾರಗಳು ಎಷ್ಟು ನೀರು ಬಿಟ್ಟಿದ್ದಾರೆ. ಬೊಮ್ಮಾಯಿಯವರು ಸಿಎಂ ಇದ್ದಾಗ ಎಷ್ಟು ನೀರು ಬಿಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಕಳೆದ ಬಾರಿ ಮಳೆ ಅಭಾವ ಇರಲ್ಲಿಲ್ಲ. ಸಮಸ್ಯೆಯು ಇರಲಿಲ್ಲ. ಸಮಸ್ಯೆ ಬರುವುದು ನೀರು ಇಲ್ಲದಾಗ ಮಾತ್ರ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸರ್ಕಾರಗಳು ಇದ್ದಾಗ ಕಾವೇರಿ ನೀರನ್ನು ತಮಿಳುನಾಡಿಗೆ ಎಷ್ಟು ಹರಿಸಿದ್ದಾರೆಂಬ ಮಾಹಿತಿ ಇದೆ. ತಮಿಳುನಾಡಿನವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ನೀರು ಬಿಡಲು ಒತ್ತಾಯಸುತ್ತಾರೆ. ಆದರೆ ರಾಜ್ಯದ 25 ಬಿಜೆಪಿ ಸಂಸದರು ಕಾವೇರಿ ಬಗ್ಗೆ ಧ್ವನಿ ಎತ್ತುವದಿಲ್ಲ ಎಂದು ದೂರಿದರು.

ಮೈತ್ರಿ ; ಕಾದು ನೋಡೋಣ
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಜೆಡಿಎಸ್‌ ಜತೆ ಕೈ ಜೋಡಿಸಿದ್ದರಿಂದ ನಮಗೆ ನಷ್ಟವಾಯಿತು. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಯಿಂದ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ಬಂದಿದೆ. ಹೀಗಿರುವಾಗ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಲಾಭ ಅಥವಾ ನಷ್ಟವಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.

Advertisement

ಈಗಾಗಲೇ ನಾವು ವಾರಕ್ಕೊಮ್ಮೆ ಜನ ಸಂಪರ್ಕ ಸಭೆ ಮಾಡಿದ್ದು, ಇಲಾಖೆವಾರು ಸಭೆ ಮಾಡಿದ್ದೇವೆ, ಮೊನ್ನೆ ನಡೆದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳು 760 ಅರ್ಜಿಗಳನ್ನು ಸ್ವೀಕಾರ ಮಾಡಿದ್ದಾರೆ. ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಶಾಸಕ ಅಭಯ ಪಾಟೀಲ್‌ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವರ ಬಗ್ಗೆ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಅಭಯ ಪಾಟೀಲ್‌ ಗೆ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ವಿರುದ್ಧವೇ ಸಾಕಷ್ಟು ಆರೋಪಗಳಿವೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next