ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಸ್ತುತ ಶೇ.45 ರಷ್ಟು ಮಳೆ ಕೊರತೆ ಉಂಟಾಗಿ ಭೀಕರ ಬರಗಾಲ ಉಂಟಾಗಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಸಮಸ್ಯೆಯಿದ್ದು, ಜೂ.15 ರ ನಂತರ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ತಿಳಿಸಿದರು.
300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ಚುನಾವಣಾ ನೀತಿ ಸಂಹಿತೆ ಇದ್ದರೂ ಕೂಡ ಬರ ಪರಿಸ್ಥಿತಿಯನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿಲ್ಲ. ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕÃ್ಗಳ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
75 ಲಕ್ಷ ಸಸಿ: ಜಿಲ್ಲಾಡಳಿತ ಸಮಾರೋಪಾದಿಯಲ್ಲಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ 75 ಲಕ್ಷ ಸಸಿಗಳನ್ನು ನೆಡಬೇಕು. ಕೆರೆ, ಕುಂಟೆಗಳ ಒತ್ತುವರಿ ತೆರವುಗೊಳಿಸಿ ಕೆರೆಗಳಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ವಿಮಾ ಅಧಿಕಾರಿಗಳು ಕಚೇರಿಯಲ್ಲಿರಿ: ವಿಮೆ ಮಾಡಿಸುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳು ಪ್ರತಿ ತಾಲೂಕಿನ ಕೃಷಿ ಇಲಾಖೆ ಕಚೇರಿಯಲ್ಲಿ ಇರಬೇಕು. ಈ ಕುರಿತು ವಿಮಾ ಕಂಪನಿಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗೆ ತಿಳಿಸಿದರು.
Advertisement
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಳೆದ ವರ್ಷ ತಾಂತ್ರಿಕ ಕಾರಣಗಳಿಂದ ಹಾಗೂ ತಡವಾಗಿದ್ದರಿಂದ ಸರ್ಕಾರ ಮೋಡ ಬಿತ್ತನೆ ಕಾರ್ಯ ಮಾಡಿರಲಿಲ್ಲ. ಆದರೆ ಈ ವರ್ಷ ಮೋಡ ಬಿತ್ತನೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೋಡ ಬಿತ್ತನೆ ನಡೆಸಲಾಗುವುದು ಎಂದರು.
Related Articles
Advertisement
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು. ಅಗತ್ಯ ಇರುವ ಕಡೆ ಮೇವು ವಿತರಿಸಲು ಮೇವು ಬ್ಯಾಂಕ್ ತೆರೆಯುವಂತೆ ಸೂಚಿಸಿದರು.
1.54 ಲಕ್ಷ ಹೆಕೇrರ್ ಬಿತ್ತನೆ ಗುರಿ: ಜಿಲ್ಲಾ ಜಂಟಿ ಕೃಷಿ ಇಲಾಖೆ ನಿರ್ದೇಶಕಿ ಎಲ್.ರೂಪ ಮಾತನಾಡಿ, ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1,54,000 ಹೆಕೇrರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 17,800 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳಿಗೆ ಬೇಡಿಕೆ ಇದ್ದು, 1040.4ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ.
ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂಧೆ, ನೆಲಗಡಲೆ ಬೀಜಗಳ ಬಿತ್ತನೆಗೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಪಶುಪಾಲನಾ ಇಲಾಖೆ, ನೇರಗಾ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ಜಿಲ್ಲೆಯಲ್ಲಿ ಬರದಿಂದ ನೀರಿನ ಸಮಸ್ಯೆ ಉಂಟಾಗಿರುವ ಗ್ರಾಮಗಳ ಕುರಿತು, ಕೈಗೊಂಡಿರುವ ಪರಿಹಾರ ಕಾಮಗಾರಿಗಳು, ಅಂತರ್ಜಲ ಹೆಚ್ಚಳಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳು, ಕಲ್ಯಾಣಿಗಳ ಸ್ವಚ್ಛತೆ, ಕೆರೆ, ಕುಂಟೆಗಳ ಒತ್ತುವರಿ ತೆರವು ಕುರಿತು ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಜಿಪಂ ಸಿಇಒ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರ ಪ್ರದೇಶದಲ್ಲಿ ಮಳೆ ಕೊಯ್ಲು ಕಡ್ಡಾಯಗೊಳಿಸಿ:
ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಕಟ್ಟಡಗಳು, ಮನೆಗಳು ಸೇರಿದಂತೆ ಇತರೆ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಮಾಡಿಸುವುದು ಕಡ್ಡಾಯಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಹೆಚ್ ಶಿವಶಂಕರ ರೆಡ್ಡಿ ಸೂಚಿಸಿದರು. ಮಳೆ ನೀರು ಸಂಗ್ರಹ ಮಾಡುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಗ್ಗಿದೆ. ಇದರಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದೆ. ಸರ್ಕಾರಿ ಕಟ್ಟಡ ನಿರ್ಮಾಣದ ಅಂದಾಜು ಪಟ್ಟಿಯಲ್ಲಿಯೇ ಮಳೆ ನೀರು ಸಂಗ್ರಹಣೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ತೊಟ್ಟಿ ಕಟ್ಟಿಸುವುದು ಕಡ್ಡಾಯಗೊಳಿಸಬೇಕು ಎಂದರು.
3ನೇ ಹಂತದ ಶುದ್ಧೀಕರಣಕ್ಕೆ ಅಂದಾಜು ಪಟ್ಟಿ ಸಲ್ಲಿಸಿ:
ಕೋಲಾರ ಜಿಲ್ಲೆಗೆ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಕೆ.ಸಿ ವ್ಯಾಲಿ ಯೋಜನೆ ನೀರು ಕೆರೆಗಳಿಗೆ ಹರಿಯುತ್ತಿದ್ದರೂ ಶುದ್ಧತೆ ಬಗ್ಗೆ ಆರೋಪ ಕೇಳಿ ಬರುತ್ತಿರುವುದರಿಂದ ಇತ್ತೀಚೆಗೆ ಹಸಿರಿನಿಂದ ಕೂಡಿದ ನೀರು ಕೆರೆಗಳಿಗೆ ಹರಿಯುತ್ತಿದೆಯೆಂಬ ಆರೋಪ ಕೇಳಿ ಬಂದಿದೆ. ಆದ್ದರಿಂದ ಹೆಬ್ಟಾಳ, ನಾಗವಾರ ನೀರಾವರಿ ಯೋಜನೆಯ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಲು ತಗುಲುವ ಅಂದಾಜು ವೆಚ್ಚದ ಬಗ್ಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿ ಎಂದರು.