Advertisement

ಬೃಹದಾಕಾರದ ಬಟ್ಟೆ ಬ್ಯಾಗ್‌

03:46 PM Jul 28, 2018 | |

ಬಟ್ಟೆ ಬ್ಯಾಗ್‌ ಅಂದಕೂಡಲೇ, ಅಂಗೈ ಅಗಲದ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾದ ಚೀಲದ ಕಲ್ಪನೆ ಮೂಡುತ್ತದೆ ಅಲ್ಲವೇ? ಆದರೆ, ಇಲ್ಲೊಂದು ಬಟ್ಟೆ ಬ್ಯಾಗ್‌ ಇದೆ. ಅದರ ಉದ್ದ, ಅಗಲವನ್ನು ಊಹಿಸಲೂ ನಿಮ್ಮಿಂದ ಸಾಧ್ಯವಿಲ್ಲ. ಯಾಕಂದ್ರೆ, ಇದು ತುಂಬಾ ಅಂದರೆ ತುಂಬಾ ದೊಡ್ಡದಿದೆ. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ನಾಗರಬಾವಿಯ ವಿನಯ್‌ ಎಂ.ಇ. ಮತ್ತು ಅವರ ತಾಯಿ ಅನುರಾಧಾ ಈ ಚೀಲವನ್ನು ಹೊಲೆದಿದ್ದಾರೆ. ಪ್ಲಾಸ್ಟಿಕ್‌ ಬಳಕೆಯನ್ನು ವಿರೋಧಿಸುವ ಇವರಿಗೆ, ಆ ಕುರಿತು ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಅನ್ನಿಸಿದಾಗ ಹೊಳೆದ ಕಲ್ಪನೆ ಇದು. ಬಟ್ಟೆ ಬ್ಯಾಗ್‌ಗಳನ್ನು ಬಳಸಿ ಎಂದು ಬಾಯಿಯಲ್ಲಿ ಹೇಳುವ ಬದಲು, ದೊಡ್ಡ ಬ್ಯಾಗ್‌ ತಯಾರಿಸಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

Advertisement

ಎಷ್ಟು ದೊಡ್ಡದಿದೆ ಗೊತ್ತಾ?
ಈ ಬಟ್ಟೆ ಚೀಲ 12.48 ಮೀಟರ್‌ ಉದ್ದ, 13.68 ಮೀಟರ್‌ ಅಗಲ ಮತ್ತು 3.78 ಮೀಟರ್‌ ಆಳವಿದೆ. ಅದರ ಹ್ಯಾಂಡಲ್‌ನ ಅಗಲ 0.66 ಮೀಟರ್‌, ಉದ್ದ 19.41 ಮೀಟರ್‌. ವೃತ್ತಿಯಲ್ಲಿ ಟೈಲರ್‌ ಆಗಿರುವ ಅನುರಾಧಾ ಮತ್ತು ವಿನಯ್‌ಗೆ, ಇಷ್ಟುದ್ದದ ಬ್ಯಾಗ್‌ ಹೊಲೆಯಲು 2 ದಿನ ಬೇಕಾಯ್ತು. ಜುಲೈ 17ರ ಬೆಳಗ್ಗೆ 360 ಮೀಟರ್‌ ಕಾಟನ್‌ ಬಟ್ಟೆಯ ರಾಶಿಯ ಮುಂದೆ ಕೂತ ಅಮ್ಮ-ಮಗ 18ರ ಸಂಜೆ ವೇಳೆಗೆ, ಬೃಹದಾಕಾರದ ಬಟ್ಟೆ ಚೀಲವನ್ನು ತಯಾರಿಸಿದರು. ಸುಮಾರು ನೂರು ಕೆ.ಜಿ. ತೂಗುವ ಈ ಚೀಲವನ್ನು, ತಮ್ಮ ಪುಟ್ಟ ಟೈಲರ್‌ ಅಂಗಡಿಯಲ್ಲಿ ಕುಳಿತೇ ಹೊಲೆದಿದ್ದಾರೆ. ಅದಕ್ಕೆ ತಂದೆ ಮತ್ತು ತಾತನ ಸಹಕಾರವೂ ಇದೆ. 

ಜುಲೈ 22ರಂದು ನಾಗರಬಾವಿಯ ಸೇಂಟ್‌ ಸೋಫಿಯಾ ಕಾನ್ವೆಂಟ್‌ ಹೈಸ್ಕೂಲ್‌ನಲ್ಲಿ ಈ ದೊಡ್ಡ ಬ್ಯಾಗ್‌ಅನ್ನು ಪ್ರದರ್ಶನಕ್ಕಿಡಲಾಗಿತ್ತು. ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ನೆರೆದವರಿಗೆ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಲಾಯಿತು. ಈ ಬ್ಯಾಗ್‌ ಹೊಲೆಯಲು ಸುಮಾರು 40 ಸಾವಿರ ರೂ. ಖರ್ಚಾಗಿದ್ದು, ಅರ್ಧದಷ್ಟು ಖರ್ಚನ್ನು ವಿನಯ್‌ ಮನೆಯವರೇ ಭರಿಸಿದ್ದಾರೆ. ಉಳಿದ ಹಣವನ್ನು ವಿನಯ್‌ರ ಕಾಲೇಜು ಪ್ರೊಫೆಸರ್‌, ಸೇಂಟ್‌ ಸೋಫಿಯಾ ಶಾಲೆಯ ಪ್ರಿನ್ಸಿಪಾಲ್‌, ಬಟ್ಟೆಯಂಗಡಿಯವರು ಹಾಗೂ ಪರಿಚಯದವರು ನೀಡಿದ್ದಾರೆ. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಇಚ್ಛೆಯಿದ್ದರೂ, ಬಾಡಿಗೆ ಕೇಳುತ್ತಿರುವುದರಿಂದ ಚೀಲವನ್ನು ಸದ್ಯಕ್ಕೆ ಸೋಫಿಯಾ ಶಾಲೆಯಲ್ಲಿಯೇ ಇಡಲಾಗಿದೆ. ಸದ್ಯದಲ್ಲಿಯೇ ಈ ಚೀಲ ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲಾಗುವ ನಿರೀಕ್ಷೆಯಿದೆ.

ಈ ಮೊದಲು ಗಿನ್ನೆಸ್‌ ದಾಖಲೆ ಗಳಿಸಿದ ಬಟ್ಟೆ ಬ್ಯಾಗ್‌ 9.36 ಮೀ. ಉದ್ದ, 10.32 ಮೀ. ಅಗಲ ಹಾಗೂ 2.64 ಆಳ ಇತ್ತು. 

ಈಗಷ್ಟೇ ಎಂಜಿನಿಯರಿಂಗ್‌ ಮುಗಿಸಿರುವ ವಿನಯ್‌, 390 ಮಿಲಿಗ್ರಾಂನಷ್ಟು ಸಣ್ಣ ಕ್ರೋಚೆಟ್‌ ಮ್ಯಾಟ್‌ ತಯಾರಿಸಿ ನ್ಯಾಷನಲ್‌ ರೆಕಾರ್ಡ್‌ ಮಾಡಿದ್ದು, ಕೌÉಡ್‌ ಪಿಕ್ಚರ್‌ ಹಾಗೂ ಡ್ರ್ಯಾಗನ್‌ ಫ್ಲೈ ಪಿಕ್ಚರ್ಗಳ ಸಂಗ್ರಹದಲ್ಲಿಯೂ ದಾಖಲೆ ನಿರ್ಮಿಸಿದ್ದಾರೆ. ತಾಯಿ ಅನುರಾಧಾ ಅವರು ಕೂಡ, ಅತ್ಯಂತ ದೊಡ್ಡ ಕಟೋರಿ ಬ್ಲೌಸ್‌ ಹೊಲೆದು ಗಿನ್ನೆಸ್‌ ದಾಖಲೆ ಬರೆದಿದ್ದಾರೆ.    

Advertisement

ಉದ್ದ- 12.48 ಮೀಟರ್‌
ಅಗಲ- 13.68 ಮೀಟರ್‌
ಆಳ- 3.78 ಮೀಟರ್‌

ಹ್ಯಾಂಡಲ್‌ ಅಗಲ 0.66 ಮೀಟರ್‌
ಹ್ಯಾಂಡಲ್‌ ಉದ್ದ- 19.41 ಮೀಟರ್‌

ಅಂಗಡಿಗೆ ಹೋಗುವಾಗ, ತರಕಾರಿ ಮಾರ್ಕೆಟ್‌ಗೆ ಹೋಗುವಾಗ ಮರೆಯದೇ ಬಟ್ಟೆಯ ಚೀಲ ತೆಗೆದುಕೊಂಡು ಹೋಗಿ. ಇದನ್ನು ಪಾಲಿಸುವುದು ಕಷ್ಟದ ಸಂಗತಿಯೇನಲ್ಲ. ಯಾಕಂದ್ರೆ, ಬಟ್ಟೆಯ ಚೀಲಗಳನ್ನು ಸುಲಭವಾಗಿ ಮಡಚಿ, ಜೇಬಿನಲ್ಲಿಟ್ಟುಕೊಳ್ಳಬಹುದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ನಾವೂ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ
-ವಿನಯ್‌ ಎಂ.ಇ 

Advertisement

Udayavani is now on Telegram. Click here to join our channel and stay updated with the latest news.

Next