Advertisement

ಹೊಂಡ ಮುಚ್ಚಿ ಎಂದರೆ ಪ್ರವೇಶ ನಿರ್ಬಂಧಿಸಿದ ಗುತ್ತಿಗೆದಾರರು !

09:52 AM Oct 25, 2019 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು – ಪೊಲಿಪು ಕರಾವಳಿ ಮೀನುಗಾರಿಕಾ ರಸ್ತೆಯೊಂದಿಗೆ ಸಂಪರ್ಕ ಸಾಧಿಸುವ ಜಂಕ್ಷನ್‌ ಬಳಿಯಲ್ಲಿನ ಅಪೂರ್ಣ ಕಾಮಗಾರಿಯಿಂದಾಗಿ ಸೃಷ್ಟಿಯಾಗಿದ್ದª ಹೊಂಡವನ್ನು ಮುಚ್ಚಿ ಎಂಬ ಬೇಡಿಕೆಯಿಟ್ಟರೆ, ಹೆದ್ದಾರಿ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ನವಯುಗ ಕಂಪೆನಿಯು ಜಂಕ್ಷನ್‌ ಅನ್ನು ಪ್ರವೇಶಕ್ಕೇ ನಿರ್ಬಂಧ ವಿಧಿಸ‌ುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಕಾಪು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ನ್ನು ಪ್ರವೇಶಿಸಿ, ಅಲ್ಲಿಂದ ಹೆದ್ದಾರಿ ರಸ್ತೆಯಿಂದ ಪೊಲಿಪುವಿಗೆ ತೆರಳಲು ನೂರಾರು ವರ್ಷಗಳಿಂದಲೂ ಸಂಪರ್ಕ ಜಂಕ್ಷನ್‌ವೊಂದಿತ್ತು. ಆದರೆ ಈ ಸಂಪರ್ಕ ಜಂಕ್ಷನ್‌ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಅಪೂರ್ಣ ಕಾಮಗಾರಿ ನಡೆದ ಪರಿಣಾಮ ದೊಡ್ಡ ಹೊಂಡವೊಂದು ಸೃಷ್ಟಿಯಾಗಿತ್ತು. ಜಲ್ಲಿ ಮತ್ತು ಡಾಮರು ಪೂರ್ಣ ಕಿತ್ತು ಹೋದ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿತ್ತು.

ಇಲ್ಲಿನ ಅಪೂರ್ಣ ಕಾಮಗಾರಿಯ ಬಗ್ಗೆ ಸ್ಥಳೀಯರು ಮತ್ತು ಪೊಲಿಪು ನಿವಾಸಿಗಳು ಕಾಪು ಪುರಸಭೆ, ಹೆದ್ದಾರಿ ಇಲಾಖೆ, ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಕಂಪೆನಿ ಮತ್ತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದು, ಜಂಕ್ಷನ್‌ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿದ್ದರು.

ಕಾಮಗಾರಿಯ ಹೊಣೆ ಹೊತ್ತಿರುವ ನವಯುಗ ಕಂಪೆನಿಯು ಸಾರ್ವಜನಿಕರ ದೂರು ಮತ್ತು ಎಲ್ಲೆಡೆಗಳಿಂದ ಬಂದ ಒತ್ತಡವನ್ನು ನಿಭಾಯಿಸಲಾಗದೇ ಪೊಲಿಪು ಜಂಕ್ಷನ್‌ನ ಪ್ರವೇಶ ರಸ್ತೆಯನ್ನು ತಡೆ ಬೇಲಿ ಹಾಕಿ ಮುಚ್ಚುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ.

ಯಾರಿಗೆಲ್ಲಾ ತೊಂದರೆ
ಕಾಪು ಪೇಟೆಯಿಂದ ಪೊಲಿಪುವಿಗೆ ಹೋಗುವ ಜನತೆ, ಅಂಚೆ ಕಚೇರಿ, ಪುರಸಭೆ ಕಾರ್ಯಾಲಯ, ದೂರವಾಣಿ ಕಚೇರಿ, ಕಾಪು ರಾಜೀವ ಭವನ, ಸರಕಾರಿ ಹಾಸ್ಟೆಲ್‌, ರೈತ ಸಂಪರ್ಕ ಕೇಂದ್ರ ಸಹಿತ ವಿವಿಧ ಕಡೆಗಳಿಗೆ ಅಗತ್ಯ ಕೆಲಸಗಳಿಗಾಗಿ ತೆರಳುವ ಜನರಿಗೆ ಇದರಿಂದ ತೀವ್ರ ತೊಂದರೆಗಳುಂಟಾಗುತ್ತಿವೆ.

Advertisement

ಹಠಾತ್‌ ನಿರ್ಬಂಧದಿಂದ ಜನರಿಗೆ ತೊಂದರೆ ಕರಾವಳಿ ರಸ್ತೆಯೊಂದಿಗೆ ಸಂಪರ್ಕ ಹೊಂದಿರುವ ಪೊಲಿಪು ಜಂಕ್ಷನ್‌ ರಸ್ತೆಯನ್ನು ಯಾವುದೇ ಸೂಚನೆ ನೀಡದೇ ಹಠಾತ್‌ ಆಗಿ ಬಂದ್‌ ಮಾಡಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಗಳಾಗುತ್ತಿವೆ. ಕಾಪು ಪೇಟೆಯಿಂದ ಜಂಕ್ಷನ್‌ ಮೂಲಕವಾಗಿ ಹೆದ್ದಾರಿಯನ್ನು ಪ್ರವೇಶಿಸುವ ವಾಹನ ಸವಾರರು ಸರ್ವಿಸ್‌ ರಸ್ತೆಗೆ ತೆರಳಲು ಸುತ್ತು ಬಳಸಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಕಾಪುವಿನಿಂದ ಪೊಲಿಪುವಿಗೆ ಹೋಗುವ ಜನರು ಹೆದ್ದಾರಿ ನಡುವೆ ಗೊಂದಲ ಮತ್ತು ಗಲಿಬಿಲಿಗೆ ಒಳಗಾಗುವಂತಾಗಿದೆ. ಮಾತ್ರವಲ್ಲದೇ ಇಲ್ಲಿ ಯಾವುದೇ ಫಲಕವನ್ನೂ ಹಾಕದೇ ಇರುವುದರಿಂದ ಜನರಿಗೆ ಕಿರಿಕಿರಿಯುಂಟಾಗುತ್ತಿದೆ.
– ವಿಜಯ ಕರ್ಕೇರ ಪೊಲಿಪು , ಸದಸ್ಯರು, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next