ಕೊಲ್ಲೂರು: ಪ್ರತಿಕೂಲ ಹವಾಮಾನದ ಕಾರಣ ಶ್ರೀಲಂಕಾ ಪ್ರಧಾನಮಂತ್ರಿ ರಣಿಲ್ ವಿಕ್ರಮ ಸಿಂಘೆ ಅವರ ರವಿವಾರದ ಕೊಲ್ಲೂರು ಕ್ಷೇತ್ರ ದರ್ಶನ ಕಾರ್ಯಕ್ರಮ ರದ್ದಾಗಿದೆ.
ವಿಕ್ರಮ ಸಿಂಘೆ ಅವರ ಸ್ವಾಗತಕ್ಕಾಗಿ ಅರೆಶಿರೂರಿನ ಹೆಲಿಪ್ಯಾಡ್‌ನಲ್ಲಿ ಎಲ್ಲ ತಯಾರಿಗಳನ್ನೂ ನಡೆಸಲಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ಬೈಂದೂರು ತಹಶೀಲ್ದಾರ್ ಕಿರಣ್ ಜಿ., ಶ್ರೀಲಂಕಾದ ಉನ್ನತ ಅಧಿಕಾರಿಗಳಾದ ಲಲಿತ್ ನಾನಾಯಕಾರ, ವಿಶ್ವನಾಥ ಅಫೋನ್ಸ್ ಮೊದಲಾದವರು ಸ್ವಾಗತಕ್ಕಾಗಿ ಬೆಳಗ್ಗಿನಿಂದ ಕಾಯುತ್ತಿದ್ದರು. ಆದರೆ ರವಿವಾರ ಬೆಳಗ್ಗಿನಿಂದ ಭಾರೀ ಮೋಡ ಕವಿದ ವಾತಾವರಣ ಹಾಗೂ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದ ಅರೆಶಿರೂರಿಗೆ ಹೆಲಿಕಾಪ್ಟರನ್ನು ಕಳಿಸಲು ಅಸಾಧ್ಯವಾಗುತ್ತದೆ; ಪ್ರಧಾನಿಯವರ ಯಾನವನ್ನು ರದ್ದುಗೊಳಿಸಬೇಕು ಎಂದು ಎಂದು ಬೆಂಗಳೂರಿನ ವಿಮಾನ ಯಾನದ ಮುಖ್ಯ ಅಧಿಕಾರಿಗಳು ಸಂಬಂಧಪಟ್ಟವರಲ್ಲಿ ಮನವಿ ಮಾಡಿದರು.
ಈ ಕಾರಣಕ್ಕಾಗಿ ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಕ್ಷೇತ್ರ ದರ್ಶನ ತಾತ್ಕಾಲಿಕವಾಗಿ ರದ್ದುಗೊಳಿಸ ಲಾಗಿದೆ. ಮಳೆಗಾಲದ ಅನಂತರ ಅವರು ಇಲ್ಲಿಗೆ ಆಗಮಿಸು ವರು ಎಂದು ಜಿಲ್ಲಾಧಿಕಾರಿಗಳು ಘೋಷಿಸಿದರು.
ಭಕ್ತರಿಗೆ ಅವಕಾಶ: ಪ್ರಧಾನ ಮಂತ್ರಿಯ ಆಗಮನವು ಪ್ರತಿಕೂಲ ಹವಾಮಾನದಿಂದ ವಿಳಂಬಗೊಳ್ಳುತ್ತಿರುವುದನ್ನು ಮನಗಂಡ ಕೊಲ್ಲೂರು ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪನ ಸಮಿತಿಯ ಸದಸÂರು ಭಕ್ತರಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಮುಚ್ಚಿಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಯಿತು
ಚಂಡಿಕಾ ಹೋಮದ ಪೂರ್ಣಾಹುತಿ: ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರ ಕ್ಷೇತ್ರ ದರ್ಶನವು ಹವಾಮಾನದ ವೈಪರೀತ್ಯದಿಂದ ರದ್ದುಗೊಂಡಿದ್ದರೂ ಶ್ರೀಲಂಕಾದ ಉನ್ನತ ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿಯನ್ನು ನೆರ ವೇರಿಸಲಾಯಿತು.