Advertisement

ಹವಾಮಾನ ವೈಪರೀತ್ಯ: 2 ವಿಮಾನಗಳು ಆಗಸದಲ್ಲಿ ಸುತ್ತಿದರೂ ಸಿಗದ ಲ್ಯಾಂಡಿಂಗ್ ಅವಕಾಶ

03:24 PM Aug 16, 2020 | keerthan |

ಕಲಬುರಗಿ: ಸತತ ಮಳೆಯಿಂದ ಹವಾಮಾನ ವೈಪರೀತ್ಯ ಉಂಟಾಗಿ ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗಿಲ್ಲ. ಅಲಿಯನ್ಸ್ ಏರ್ ಮತ್ತು ಸ್ಟಾರ್ ಏರ್ ವಿಮಾನಗಳು ಇಳಿಸಲು 40 ನಿಮಿಷಗಳ‌ ಕಾಲ ಪ್ರಯತ್ನಿಸಿ ಆಗಸದಲ್ಲೇ ಸುತ್ತುಸುತ್ತಿದರೂ ಸಫಲವಾಗದ ಪ್ರಸಂಗ ನಡೆದಿದೆ.

Advertisement

ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಯತ್ತ ಅಲಯನ್ಸ್ ಏರ್ ಮತ್ತು ಸ್ಟಾರ್ ಏರ್ ವಿಮಾನಗಳು ಪ್ರಯಾಣಿಕರ ಹೊತ್ತು ಬಂದಿದ್ದವು. ಆದರೆ, ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದ್ದ ಕಾರಣ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ವಿಮಾನಗಳು ಇಲ್ಲೇ ಸುತ್ತುವರಿಯುತ್ತಿದ್ದರೂ ವ್ಯತಿರಿಕ್ತ ವಾತಾವರಣ ಹಿನ್ನೆಲೆಯಲ್ಲಿ ಎಟಿಸಿ ಸಿಗ್ನಲ್ ವಿಮಾನಗಳನ್ನು ಇಳಿಸಲು ಅನುಮತಿ ನೀಡಲಿಲ್ಲ. ಅಲಯನ್ಸ್ ಏರ್ ವಿಮಾನ ಹತ್ತಿರದ ಹೈದರಾಬಾದ್ ಗೆ ಕಳುಹಿಸಲಾಯಿತು ಹಾಗೂ ಸ್ಟಾರ್ ಏರ್ ವಿಮಾನ ಮರಳಿ ಬೆಂಗಳೂರಿಗೆ ವಾಪಸ್ ಹೋಯಿತು ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ‘ಉದಯವಾಣಿ’ಗೆ ತಿಳಿಸಿದರು.

ಅಲಯನ್ಸ್ ಏರ್ ವಿಮಾನ ಬೆಂಗಳೂರಿನಿಂದ ತನ್ನ ಸರಿಯಾದ ಸಮಯ ಬೆಳಿಗ್ಗೆ 10.15ಕ್ಕೆ 50 ಜನ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿ 11.45ಕ್ಕೆ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡಿಂಗ್ ಸಮಸ್ಯೆಯಿಂದ 40 ನಿಮಿಷ ಆಗಸದಲ್ಲೇ ಸುತ್ತುವರಿದು ಕೊನೆಗೆ ಹೈದ್ರಾಬಾದ್ ಗೆ ಮಾರ್ಗ ಬದಲಾವಣೆ ಮಾಡಲಾಯಿತು. ಇದೇ ವಿಮಾನದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತೆರಳಲು 52 ಟಿಕೆಟ್ ಕಾಯ್ದಿರಿಸಿದ್ದರು.

ಇತ್ತ, ಸ್ಟಾರ್ ಏರ್ ವಿಮಾನ ತನ್ನ ನಿಗದಿತ ಸಮಯಕ್ಕೆ ತಡವಾಗಿ ಬಂದರೂ ಇಳಿಯಲು ಅನುಕೂಲಕರ ಪರಿಸ್ಥಿತಿ ಇರದ ತನ್ನ ಒಂದು ದಿನದ ಹಾರಾಟವನ್ನೇ ರದ್ದು ಮಾಡಿದೆ. ಈ ವಿಮಾನ ಬೆಂಗಳೂರಿನಿಂದ ಬೆಳಿಗ್ಗೆ 8.40ಕ್ಕೆ ಹೊರಟು, ಕಲಬುರಗಿಗೆ 9.45ಕ್ಕೆ ಬರಬೇಕಿತ್ತು. ತನ್ನ ನಿಗದಿತ ಸಮಯಕ್ಕಿಂತ‌ ಎರಡು ಗಂಟೆಗೂ ಅಧಿಕ ಕಾಲ ತಡವಾಗಿ ಬಂದು 40 ನಿಮಿಷ ಆಗಸದಲ್ಲೇ ಸುತ್ತುವರಿದಿದೆ. ಆದರೂ, ಎಟಿಸಿ ಸಿಗ್ನಲ್ ವಿಮಾನ ಇಳಿಸಲು ಅನುಮತಿ ನೀಡದ ಕಾರಣ ಬೆಂಗಳೂರಿಗೆ ವಾಪಸ್ ಆಗಿದೆ.

ಈ ವಿಮಾನದಲ್ಲಿ ಬೆಂಗಳೂರಿನಿಂದ ಕಲಬುರಗಿಗೆ 40 ಪ್ರಯಾಣಿಕರು ಹತ್ತಿದ್ದರು. ಇದೇ ವಿಮಾನದಲ್ಲಿ ಕಲಬುರಗಿಯಿಂದ 44 ಜನ ಪ್ರಯಾಣಿಕರು ಹೋಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋದ ವಿಮಾನ ಮರಳಿ ಬಾರದೆ ಹಾರಾಟ ಸ್ಥಗಿತಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next