Advertisement
ಮೀನುಗಾರಿಕೆ ಋತು ಆರಂಭದ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಉತ್ತಮ ಮೀನುಗಾರಿಕೆ ನಡೆಯುತ್ತದೆ. ಆದರೆ ಈ ಬಾರಿ ಮಳೆ ಕೊರತೆ, ತಾಪಮಾನ ಏರಿಕೆಯಿಂದ ಮೀನೇ ಇಲ್ಲ.
ಋತುವಿನಲ್ಲಿ ಒಮ್ಮೆ ಸಮುದ್ರಕ್ಕೆ ತೆರಳಿದರೆ ದೋಣಿಗಳಿಗೆ ತಲಾ 3 ಲಕ್ಷ ರೂ.ನಷ್ಟು ಮೌಲ್ಯದ ಮೀನು ಸಿಗುತ್ತದೆ. ಆದರೆ ಈಗ ಕನಿಷ್ಠ ಒಂದು ಲಕ್ಷ ರೂ.ಗಳ ಮೀನು ಸಿಗುತ್ತಿಲ್ಲ. ಮೀನು ಹುಡುಕಿ ಇನ್ನಷ್ಟು ಆಳ ಸಮುದ್ರಕ್ಕೆ ತೆರಳಿದಂತೆ ಖರ್ಚು ಇನ್ನಷ್ಟು ಹೆಚ್ಚು. ಪಸೀìನ್ ಬೋಟ್ ಆದರೆ 400 ಲೀ. ಡೀಸೆಲ್ ವೆಚ್ಚ, 30 ಮಂದಿಯ ಊಟ, ವೇತನ ಎಲ್ಲ ಸೇರಿ ದಿನಕ್ಕೆ 50-60 ಸಾವಿರ ರೂ. ಖರ್ಚಾಗುತ್ತದೆ. ಟ್ರಾಲ್, ತ್ರಿಸೆವೆಂಟಿ ಬೋಟುಗಳಿಗೆ ದಿನಕ್ಕೆ 100 ಲೀ. ಡೀಸೆಲ್ ಬೇಕಿದ್ದು, 20-25 ಸಾವಿರ ರೂ. ಖರ್ಚಾಗುತ್ತದೆ. ಮೀನು ಸಿಗುವವರೆಗೆ ಸಮುದ್ರದಲ್ಲಿ ಇರಬೇಕು. ಕೆಲವೊಮ್ಮೆ ಡೀಸೆಲ್ ಖರ್ಚಿನಷ್ಟು ಮೀನು ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು. ಜನವರಿ-ಫೆಬ್ರವರಿ ಅನುಭವ
ವಾಡಿಕೆಯಷ್ಟು ಮಳೆ ಬಾರದೆ ಇರುವುದರಿಂದ ಸಮುದ್ರದಲ್ಲಿ ಆಗಸ್ಟ್ ನಲ್ಲಿಯೇ ಜನವರಿ- ಫೆಬ್ರವರಿಯಂಥ ಅನುಭವ ಆಗುತ್ತಿದೆ. ಸಮುದ್ರದ ನೀರಿನ ತಾಪ 22ರಿಂದ 25 ಡಿಗ್ರಿ ಸೆ. ಇದ್ದರೆ ಮೀನಿನ ಸಮೂಹ ಮೇಲ್ಭಾಗಕ್ಕೆ ಬರುತ್ತದೆ. ಆದರೆ 15 -20 ದಿನಗಳಿಂದ ಮಳೆ ಇಲ್ಲದೆ ನೀರಿನ ಉಷ್ಣಾಂಶ 30 ಡಿಗ್ರಿ ಸೆ. ವರೆಗೆ ಇದೆ. ಅದೂ ಏರುಪೇರು ಆಗುತ್ತಿದೆ ಎನ್ನುತ್ತಾರೆ ಕೊಡೇರಿಯ ಮೀನುಗಾರ ಸತ್ಯನಾರಾಯಣ.
Related Articles
ದ.ಕ., ಉಡುಪಿ ಹಾಗೂ ಉ.ಕ. ಜಿಲ್ಲೆಗಳಲ್ಲಿ ಒಟ್ಟು 9 ಸಾವಿರಕ್ಕೂ ಮಿಕ್ಕಿ ನಾಡದೋಣಿಗಳಿದ್ದು, 27 ಸಾವಿರಕ್ಕೂ ಅಧಿಕ ಮಂದಿ ನಾಡದೋಣಿಯನ್ನೇ ಅವಲಂಬಿಸಿದ್ದಾರೆ. ಉಡುಪಿಯಲ್ಲಿ 1,600ಕ್ಕೂ ಮಿಕ್ಕಿ ಹಾಗೂ ದ.ಕ.ದಲ್ಲಿ 1 ಸಾವಿರಕ್ಕೂ ಅಧಿಕ ಆಳ ಸಮುದ್ರ ಬೋಟುಗಳಿದ್ದು, ಸಾವಿರಾರು ಮಂದಿ ಜೀವನೋಪಾಯಕ್ಕಾಗಿ ಮೀನುಗಾರಿಕೆ ಆಶ್ರಯಿಸಿದ್ದಾರೆ.
Advertisement
ಹವಾಮಾನ ವೈಪರೀತ್ಯವೇ ಎಲ್ಲದಕ್ಕೂ ಕಾರಣ. ನಿರಂತರ ಮಳೆಯಾಗದೆ, ತಾಪಮಾನ ಏರಿಳಿತ ಆಗುತ್ತಿರುವುದರಿಂದ ಈ ರೀತಿ ಆಗುತ್ತಿದೆ. ಸಾಮಾನ್ಯವಾಗಿ ಕೆಲವು ಜಾತಿಯ ಮೀನುಗಳು ಮಾನ್ಸೂನ್‌ನಲ್ಲಿ ಮರಿ ಇಡುತ್ತವೆ. ಇನ್ನು ಕೆಲವು ಮಾನ್ಸೂನ್ ಅನಂತರ ಮರಿ ಇಡುತ್ತವೆ. ಈಗ ವಾತಾವರಣದಲ್ಲಿ ಇಷ್ಟೊಂದು ಏರುಪೇರು ಕಂಡುಬರುತ್ತಿರುವುದರಿಂದ ಮೀನುಗಳು ಮರಿ ಹಾಕಲು ವಲಸೆ ಹೋಗಿರುವ ಸಾಧ್ಯತೆಗಳು ಇರಬಹುದು. 3-4 ವರ್ಷಗಳಿಂದ ಈ ರೀತಿ ಏರುಪೇರು ಕಂಡುಬರುತ್ತಿದೆ.– ರಾಜೇಶ್, ಪ್ರಧಾನ ವಿಜ್ಞಾನಿ, ಈಗ ಬೂತಾಯಿ, ಬಂಗುಡೆ, ಅಂಜಲ್ ಸಿಕ್ಕಿದರೆ ಒಳ್ಳೆಯದು. ಆದರೆ ಅಲ್ಪಸ್ವಲ್ಪ ಬಂಗುಡೆ ಸಿಗುತ್ತಿದೆ. ಬೂತಾಯಿಗಾಗಿ ಮೀನುಗಾರರು ಕಾಯುತ್ತಿದ್ದಾರೆ. ಆರಂಭದಲ್ಲಿ ಒಮ್ಮೆ ಸರಿಯಾದ ಮೀನುಗಾರಿಕೆ ಆಗಬೇಕು. ಆದರೆ ಅದೇ ಆಗಿಲ್ಲ. ಮಳೆ ಕಡಿಮೆಯಾಗಿದೆ, ಸಮುದ್ರದ ನೀರು ಬಿಸಿಯೇರಿದೆ. ಹೀಗಾದಾಗ ಮೀನುಗಳ ಸಮೂಹ ಸಮುದ್ರ ತಂಪಾಗಿರುವ ಕಡೆಗೆ ಹೋಗುತ್ತದೆ. ಮೀನುಗಾರರ ಪರಿಸ್ಥಿತಿ ಚಿಂತಾಜನಕ ಆಗಿದೆ. ಕಡಲು ಇನ್ನೊಮ್ಮೆ ಪ್ರಕ್ಷುಬ್ಧಗೊಳ್ಳಬೇಕು. ಹೆಚ್ಚಿನವರು ಈ ಬಾರಿಯ ಋತು ಚೆನ್ನಾಗಿರಬಹುದು ಎಂದುಕೊಂಡು ಹೊಸ ದೋಣಿ ಖರೀದಿಸಿದ್ದಾರೆ. ಆದರೆ ಆರಂಭದಲ್ಲೇಹೊಡೆತ ಬಿದ್ದಿದೆ.
– ರಮೇಶ್ ಕುಂದರ್ ಗಂಗೊಳ್ಳಿ, ಮೀನುಗಾರ -ಪ್ರಶಾಂತ್ ಪಾದೆ