ರಾಜ್ಯ ಮಾತ್ರವಲ್ಲದೆ ಇಡೀ ದೇಶ ಪ್ರಸಕ್ತ ಬೇಸಗೆ ಋತುವಿನಲ್ಲಿ ತೀರಾ ವಿಚಿತ್ರವಾದ ಹವಾಮಾನ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಸೂರ್ಯನ ಪ್ರಖರತೆಯಿಂದಾಗಿ ಭೂಮಿ ಸುಡುತ್ತಿದ್ದರೆ, ಅಸ್ಸಾಂ ಸಹಿತ ಒಂದೆರಡು ಕಡೆ ಭಾರೀ ಮಳೆ ಸುರಿದು ಹಾನಿ ಸಂಭವಿಸಿದೆ. ಇನ್ನು ಕರ್ನಾಟಕದಲ್ಲಂತೂ ಈ ಬಾರಿ ಬೇಸಗೆಯಲ್ಲಿ ತಾಪಮಾನ ಪ್ರತೀದಿನ ಎಂಬಂತೆ ಹೆಚ್ಚುತ್ತಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತಲೇ ಸಾಗಿದೆ. ಬಿಸಿಲಿನ ಧಗೆಯ ಜತೆಜತೆಯಲ್ಲಿ ರಾಜ್ಯದ ವಿವಿಧೆಡೆ ಬಿಸಿ ಗಾಳಿಯ ಪ್ರಕೋಪವೂ ಹೆಚ್ಚಿದೆ. ಇದರ ಪರಿಣಾಮ ಜನಜೀವನ ನಲುಗಿಹೋಗಿದೆ.
ಕಳೆದ ಮಳೆಗಾಲದ ಋತುವಿನಲ್ಲಿ ವರುಣ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಇದರ ನಡುವೆ ಈ ಬಾರಿ ಬೇಸಗೆ ಋತುವಿನಲ್ಲಿ ಸೂರ್ಯ ಬೆಳಗ್ಗೆಯಿಂದಲೇ ಸುಡುತ್ತಿದ್ದಾನೆ. ಹೀಗಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ನೀರಿನ ಅಭಾವ ತಲೆದೋರಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಸದ್ಯಕ್ಕಂತೂ ಜನರು ಆಗಸದತ್ತ ಮುಖ ಮಾಡಿ ಯಾವಾಗ ಮಳೆ ಸುರಿಯುವುದೋ ಎಂದು ನಿರೀಕ್ಷೆಯ ನೋಟ ಬೀರುತ್ತಿದ್ದಾರೆ.
ನೀರಿನ ಅಭಾವ ತೀವ್ರಗೊಂಡಿರುವುದರಿಂದ ನೀರಿಗಾಗಿ ಹತ್ತೂರು ಅಲೆದಾಡುವ ಪರಿಸ್ಥಿತಿ ತಲೆದೋರಿದೆ. ರಾಜ್ಯದೆಲ್ಲೆಡೆ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೆಲವೆಡೆ ಜನತೆ ಕೊಡ ನೀರಿಗಾಗಿ ತಡಕಾಡತೊಡಗಿದ್ದಾರೆ. ಬಿಸಿಲಿನ ತೀವ್ರತೆಯ ಪರಿಣಾಮ ಅಂತರ್ಜಲ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಕೊಳವೆಬಾವಿಗಳು ಕೂಡ ಬತ್ತಿ ಹೋಗಿವೆ. ಕೆಲವು ಕೊಳವೆಬಾವಿಗಳಲ್ಲಿ ತೀರಾ ಕನಿಷ್ಠ ಪ್ರಮಾಣದಲ್ಲಿ ನೀರು ಲಭಿಸುತ್ತಿದೆಯಾದರೂ ನೀರಿನ ಶುದ್ಧತೆ, ಗುಣಮಟ್ಟದ ಬಗೆಗೆ ಆತಂಕವಂತೂ ಇದ್ದೇ ಇದೆ. ಭೂಮಿಯ ತಳದಲ್ಲಿರುವ ನೀರಿನಲ್ಲಿ ರಾಸಾಯನಿಕ ಅಂಶಗಳು ಹೆಚ್ಚಾಗಿರುವುದರಿಂದ ಇದರ ಸೇವನೆ ಕೂಡ ವಿವಿಧ ಅನಾರೋಗ್ಯಗಳಿಗೆ ಕಾರಣವಾದೀತು. ಸದ್ಯ ಲಭ್ಯವಿರುವ ನೀರು ಕೂಡ ಕಲ್ಮಶಯುಕ್ತವಾಗಿದ್ದು, ಇದರ ಸೇವನೆ ಕೂಡ ಅಪಾಯಕಾರಿ. ಒಂದು ಕೊಡ ನೀರು ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಇರುವಾಗ ಜನರು ಈ ಎಲ್ಲ ಸೂಕ್ಷ್ಮ ವಿಷಯಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಂಬಂಧಿತ ಇಲಾಖೆ, ಸ್ಥಳೀಯಾಡಳಿಯ ಸಂಸ್ಥೆಗಳು ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು.
ಈಗಾಗಲೇ ರಾಜ್ಯದ ಕೆಲವೆಡೆ ಆಂಶಿಕ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಬೇಸಗೆ ಮಳೆ ಸುರಿಯುವ ಸಾಧ್ಯತೆ ಇದ್ದು ಹೀಗಾದಲ್ಲಿ ಇಳೆ ಒಂದಿಷ್ಟು ತಂಪಾದೀತು. ತೀರಾ ಅಲ್ಪಪ್ರಮಾಣದ ಮಳೆ ಸುರಿದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ, ಬಿಸಿಲಿನ ಕಾವು ಹೆಚ್ಚಾಗಿ, ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯಲಿರುವುದಂತೂ ನಿಶ್ಚಿತ. 2-3 ದಿನಗಳ ಕಾಲ ಉತ್ತಮ ಮಳೆ ಸುರಿದಲ್ಲಿ ಹಾಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಲಭಿಸೀತು. ಇದೇ ವೇಳೆ ಪ್ರಥಮ ಮಳೆಯ ವೇಳೆ ಜನರು ಒಂದಿಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಬೇಸಗೆ ಮಳೆ ನೀರು ರೋಗವಾಹಕವಾಗಿದ್ದು ವಿವಿಧ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುತ್ತದೆ. ಈ ಬಗ್ಗೆ ಜನರು ಎಚ್ಚರ ವಹಿಸುವುದು ಅತ್ಯವಶ್ಯ. ಸದ್ಯದ ಪರಿಸ್ಥಿತಿಯಲ್ಲಿ ಜನರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅತಿಯಾದ ತಾಪಮಾನ ಮತ್ತು ಮುಂದೆ ಸುರಿಯಲಿರುವ ಬೇಸಗೆ ಮಳೆಯನ್ನು ಗಮನದಲ್ಲಿರಿಸಿ ಜನರು ತಮ್ಮ ಒಟ್ಟಾರೆ ಜೀವನಕ್ರಮದಲ್ಲಿ ಕಾಲಕ್ಕೆ ತಕ್ಕುದಾದ ಬದಲಾವಣೆ ಮಾಡಿಕೊಳ್ಳಬೇಕಿರುವುದು ಈ ಕಾಲದ ತುರ್ತು.