ಒಂದು ಕಾರ್ಡ್‌ನಲ್ಲಿ ನಾಣ್ಯಕ್ಕಿಂತ ಚಿಕ್ಕದಾದ ಒಂದು ರಂಧ್ರ ಮಾಡಿ ನಾಣ್ಯವನ್ನು ಅದರಿಂದ ತೂರಿಸಲು ಪ್ರಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ. ಪ್ರೇಕ್ಷಕರಿಗೂ ಕೂಡ ಪ್ರಯತ್ನಿಸಲು ಕೊಡುತ್ತಾನೆ. ಕತ್ತರಿಸಿರುವ ರಂಧ್ರ ನಾಣ್ಯಕ್ಕಿಂತ ಚಿಕ್ಕದಾದ ಕಾರಣ ನಾಣ್ಯ, ಒಂದು ಕಡೆ ತೂರಿ ಇನ್ನೊಂದು ಕಡೆ ಬರಲು ಸಾಧ್ಯವಾಗುವುದಿಲ್ಲ. ಈಗ ಜಾದೂಗಾರ ಅದೇ ಕಾರ್ಡನ್ನು ಮತ್ತೆ ಕೈಗೆತ್ತಿಕೊಂಡು ತನ್ನ ಯಕ್ಷಿಣಿ ಶಕ್ತಿಯಿಂದ ಆ ಚಿಕ್ಕದಾದ ರಂಧ್ರದಿಂದಲೇ ನಾಣ್ಯವನ್ನು ಸಲೀಸಾಗಿ ಹೊರಗೆಳೆಯುತ್ತಾನೆ!
ಬೇಕಾಗುವ ವಸ್ತುಗಳು:
ಒಂದು ಇಸ್ಪೀಟ್ ಕಾರ್ಡ್ ಅಥವಾ ವಿಸಿಟಿಂಗ್ ಕಾರ್ಡ್, ನಾಣ್ಯ, ಕತ್ತರಿ (ರಂಧ್ರವನ್ನು ಕತ್ತರಿಸಲು ದೊಡ್ಡವರ ಸಹಾಯ ಪಡೆದುಕೊಳ್ಳಿ)
Advertisement
ಮಾಡುವ ವಿಧಾನ:ಒಂದು ಕಾರ್ಡನ್ನು ಮಧ್ಯ ಭಾಗದಲ್ಲಿ ಮಡಚಿ, ಅರ್ಧ ಚಂದ್ರಾಕೃತಿಯಲ್ಲಿ ಕತ್ತರಿಸಿ. (ಚಿತ್ರವನ್ನು ಗಮನಿಸಿ) ಮಡಚಿರುವ ಕಾರ್ಡನ್ನು ಬಿಡಿಸಿದರೆ ಮಧ್ಯಭಾಗದಲ್ಲಿ ಒಂದು ರಂಧ್ರವಾಗಿರುತ್ತದೆ. ಈ ರಂಧ್ರ ನಾಣ್ಯಕ್ಕಿಂತಲೂ ಚಿಕ್ಕದಾಗಿರಬೇಕೆಂಬುದನ್ನು ನೆನಪಿನಲ್ಲಿಡಿ. ಈಗ ಆ ಕತ್ತರಿಸಿದ ವೃತ್ತದ ಕೆಳಗೆ ಕಾರ್ಡಿನ ಒಂದು ಭಾಗದಲ್ಲಿ, ನಾಣ್ಯ ತೂರುವಷ್ಟುದ್ದದ ಗೆರೆಯನ್ನು ಹಾಕಿಕೊಂಡು, ಕತ್ತರಿ ಅಥವಾ ಬ್ಲೇಡಿನ ಸಹಾಯದಿಂದ ಕತ್ತರಿಸಿ. ಪುನಃ ಕಾರ್ಡನ್ನು ಮಡಚಿ ಗೆರೆ ಹಾಕಿದ ಭಾಗವನ್ನು ಹಿಂದಕ್ಕೆ ಬರುವಂತೆ ಹಿಡಿದು, ನಾಣ್ಯವನ್ನು ಮಡಚಿದ ಭಾಗದಿಂದ ತೂತಿನೆಡೆಗೆ ತೂರಿಸಲು ಕಾರ್ಡ್ ಒಳಗೆ ಸೇರಿಸುವ ಹಾಗೆ ನಟಿಸುತ್ತಾ ನಾಣ್ಯವನ್ನು ಕತ್ತರಿಸಿದ ಗೆರೆಯೊಳಗಿಂದ ತೂರಿಸಿ ಕಾರ್ಡಿನ ಹಿಂಭಾಗಕ್ಕೆ ಎಳೆದೊಯ್ದು ನಾಣ್ಯವನ್ನು ಕತ್ತರಿಸಿದ ರಂಧ್ರದ ಪಕ್ಕದಿಂದ ಹೊರತೆಗೆಯಿರಿ. ಪ್ರೇಕ್ಷಕರಿಗೆ ನಾಣ್ಯ ರಂಧ್ರದಿಂದಲೇ ಹೊರ ಬಂದಿತೆನಿಸುತ್ತದೆ. ಈ ಟ್ರಿಕ್ಕನ್ನು ಸುಲಭವಾಗಿ ಕಲಿಯಲು ಗಾಯತ್ರಿ ಯತಿರಾಜ್ ಯೂಟ್ಯೂಬ್ ಚಾನಲ್‌ಗೆ ಭೇಟಿ ಕೊಡಿ.
ವೀಡಿಯೊ ಕೊಂಡಿ- goo.gl/Xt66Ha