Advertisement

ಪೊಲೀಸ್‌ ಠಾಣೆ ಸೀಲ್‌ಡೌನ್‌ ತೆರವು

11:05 PM May 29, 2020 | Sriram |

ಕಾರ್ಕಳ: ಕಾರ್ಕಳ ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ ಓರ್ವರಿಗೆ ಕೋವಿಡ್ 19 ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ರವಿವಾರ ಸೀಲ್‌ಡೌನ್‌ ಆಗಿದ್ದ ನಗರ, ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಚೇರಿಯನ್ನು ಮತ್ತೆ ತೆರೆಯಲಾಗಿದೆ.

Advertisement

ಸೀಲ್‌ಡೌನ್‌ ಸಂದರ್ಭ ಕಾರ್ಯನಿರ್ವಹಣೆಗಾಗಿ ಠಾಣೆಯ ಬಳಿಯಲ್ಲೇ ಶಾಮಿಯಾನ ಹಾಕಿ ಕಂಪ್ಯೂಟರ್‌ ಜೋಡಣೆ ಮಾಡ ಲಾಗಿತ್ತು. ಇದೀಗ ಸೀಲ್‌ಡೌನ್‌ ತೆರವುಗೊಳಿಸಿದ್ದರಿಂದ ಶನಿವಾರದಿಂದ ಠಾಣೆಯಲ್ಲೇ ಕಾರ್ಯನಿರ್ವಹಣೆ ನಡೆಯಲಿದೆ.

ದಿನಂಪ್ರತಿ ಸ್ಯಾನಿಟೈಸ್‌
ಠಾಣೆ ಸಿಲ್‌ಡೌನ್‌ ಆದ ಬಳಿಕ ದಿನಂಪ್ರತಿ ಪುರಸಭೆ ವತಿಯಿಂದ ಠಾಣೆಯ ಒಳಾಂಗಣ ಹಾಗೂ ಹೊರಂ ಗಣಕ್ಕೆ ಸ್ಯಾನಿಟೈಸ್‌ ಮಾಡಲಾಗುತ್ತಿತ್ತು. ಅಜೆಕಾರು ಠಾಣೆಯ ಎಎಸ್‌ಐ ಓರ್ವರಿಗೆ ಕೋವಿಡ್ 19 ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಅಜೆಕಾರು ಠಾಣೆ ಯನ್ನೂ ಸಿಲ್‌ಡೌನ್‌ ಮಾಡಲಾಗಿತ್ತು. ಅದನ್ನು ಈಗ ತೆರವುಗೊಳಿಸಲಾಗಿದೆ.

ವರದಿ ಇನ್ನೂ ಬಂದಿಲ್ಲ
ಮುಂಬಯಿಯಿಂದ ಊರಿಗೆ ಆಗಮಿಸುವವರನ್ನು ತಪಾಸಣೆ ನಡೆಸುವ ಸಲುವಾಗಿ ನಿಪ್ಪಾಣಿಗೆ ತೆರಳಿದ್ದ ನಗರ ಠಾಣೆಯ ಎಸ್‌ಐ ಸಹಿತ 4 ಮಂದಿ ಪೊಲೀಸರು 12 ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಅವರೆಲ್ಲರ ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ವರದಿ ಇನ್ನೂ ಬಂದಿಲ್ಲ. ಹೀಗಾಗಿ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲೇ ಇರುವಂತಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ನಾಸಿರ್‌ ಹುಸೇನ್‌ ಸಹಿತ 37 ಮಂದಿ ಸಿಬಂದಿ, ನಗರ ಠಾಣೆ ಎಸ್‌ಐ ಮಧು ಬಿ.ಇ. ಸಹಿತ 38 ಮಂದಿ ಮತ್ತು ಅಜೆಕಾರು ಠಾಣೆ ಎಸ್‌ಐ ಸುದರ್ಶನ್‌ ಸಹಿತ 21 ಮಂದಿ ಸಿಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿ ಕಾಪು, ಶಿರ್ವ, ಪಡುಬಿದ್ರಿ ಠಾಣೆ ಸಿಬಂದಿ ಕಾರ್ಕಳದ ಮೂರು ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಟ, ವಡ್ಡರ್ಸೆ, ಮಲ್ಪೆ, ತೆಂಕನಿಡಿಯೂರು ಸೀಲ್‌ಡೌನ್‌ ತೆರವು ಮಾಡಿಲ್ಲ. ಎಂದಿನಂತೆ ಜನಸಂಚಾರ ಸ್ಥಗಿತವಾಗಿದೆ.

Advertisement

ಬ್ರಹ್ಮಾವರ ಠಾಣೆ: ಚಟುವಟಿಕೆ ಪ್ರಾರಂಭ
ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಓರ್ವರಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕ್ಲೋಸ್‌ಡೌನ್‌ ಇದ್ದ ಠಾಣೆ ಪುನಃ ಚಟುವಟಿಕೆ ಪ್ರಾರಂಭಿಸಿದೆ.

ಠಾಣೆಯನ್ನು ಸ್ಯಾನಿಟೈಸ್‌ ಮಾಡಿ ಭಾಗಶಃ ಬಳಸಿಕೊಳ್ಳಲಾಗುತ್ತಿದೆ. ಠಾಣಾಧಿಕಾರಿ ಸಹಿತ 36 ಮಂದಿ ಕ್ವಾರಂಟೈನ್‌ನಲ್ಲಿದ್ದು, ಎಲ್ಲರ ವರದಿಯೂ ನೆಗೆಟಿವ್‌ ಬಂದಿದೆ. ಪ್ರಸ್ತುತ ಕೋಟ, ಹಿರಿಯಡ್ಕ ಸಹಿತ ವಿವಿಧ ಠಾಣೆಗಳ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next