ಕನಕಪುರ: ಅಕ್ರಮವಾಗಿ ಒತ್ತುವರಿ ಮಾಡಿದ್ದ ಕೆರೆಯನ್ನು ಸುತ್ತಮುತ್ತಲ ಊರಿನ ಗ್ರಾಮಸ್ಥರ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಗಿದೆ. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹೇರಂದ್ಯ ಪನಹಳ್ಳಿ, ಗುಳಗನಹಳ್ಳಿ ಮತ್ತು ಕೂಮೇಗೌಡನದೊಡ್ಡಿ ಗ್ರಾಮಕ್ಕೆ ಸೇರಿದ ಸರ್ವೇ ನಂ.117ರಲ್ಲಿ ಸರ್ಕಾರಿ ಕೆರೆಯನ್ನು ಗುಳಗನಹಳ್ಳಿಯ ಶಿವರಾಮು ಎಂಬುವವರು ಒತ್ತುವರಿ ಮಾಡಿಕೊಂಡು ಕೆರೆ ಅಭಿವೃದ್ಧಿಗೆ ತಡೆಯುಂಟು ಮಾಡಿದ್ದಾರೆ.
ಹೀಗಾಗಿ ಕೆರೆ ಒತ್ತುವರಿ ತೆರವುಗೊಳಿಸಿ, ಜಲಮೂಲ ರಕ್ಷಣೆ ಮತ್ತು ಗೋವುಗಳ ನೀರಿನ ಬವಣೆ ನೀಗಿಸಲು ಒತ್ತುವರಿ ತೆರವುಗೊಳಿಸಬೇಕು ಎಂದು ಮೂರು ಗ್ರಾಮಗಳ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸರ್ವೇಯರ್ ಪ್ರಭಾಕರ್ ಮತ್ತು ಸಿಬ್ಬಂದಿ ಮಂಗಳವಾರ ಸರ್ವೇ ನಡೆಸಿ, ಒತ್ತುವರಿಯಾಗಿದ್ದ ಸುಮಾರು ಮೂರು ಎಕರೆಗೂ ಹೆಚ್ಚು ವಿಸ್ತೀರ್ಣ ಗುರುತಿಸಿ, ಚೆಕ್ ಬಂದಿ ಹಾಕಿದ್ದಾರೆ.
ಸುತ್ತಲಿನ 3 ಗ್ರಾಮಗಳ ಗ್ರಾಮಸ್ಥರು ಒತ್ತುವರಿಯಾಗಿದ್ದ ಮೂರು ಎಕರೆಗೂ ಹೆಚ್ಚು ಸರ್ಕಾರಿ ಜಾಗದಲ್ಲಿ ಹಾಕಿದ್ದ ತಂತಿ ಬೇಲಿಯನ್ನು ಯಂತ್ರಗಳ ಮೂಲಕ ತೆರವುಗೊಳಿಸಿದ್ದಾರೆ. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಅಧ್ಯಕ್ಷ ಪುಟ್ಟರಾಜು ಮಾತನಾಡಿ, ನಮ್ಮ ಪೂರ್ವಿಕರು ಕಾಲದಿಂದಲೂ ಜಲಮೂಲ ರಕ್ಷಣೆ ಮತ್ತು ಗೋವುಗಳ ಕುಡಿಯುವ ನೀರಿಗೆ ಅನುಕೂಲವಾಗಲೆಂದು ಕೆರೆ ನಿರ್ಮಿಸಿದ್ದಾರೆ.
ಅಲ್ಲದೆ ಕೆರೆ ಒತ್ತುವರಿ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದೆ. ಅರಣ್ಯ ಪ್ರದೇಶವನ್ನೂ ಅಕ್ರಮವಾಗಿ ಒತ್ತುವರಿ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳು ಒತ್ತುವರಿ ಅರಣ್ಯ ಭೂಮಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೇರಂದ್ಯಪನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಗೋಪಾಲ್, ಗ್ರಾಮದ ಮುಖಂಡ, ತಿಮ್ಮಪ್ಪ, ವೆಂಕಟೇಶ್, ಬೀರಪ್ಪ, ಪುಟ್ಟಣ್ಣ, ಗುಳಗನಹಳ್ಳಿ ಗ್ರಾಮದ ಕನಕೇಗೌಡ, ಬೈರಣ್ಣ, ರುದ್ರಸ್ವಾಮಿ, ನಾಗಣ್ಣ ಸೇರಿದಂತೆ ಕೂಮೇಗೌಡನ ದೊಡ್ಡಿಯ ಕುಳ್ಳಪ್ಪ ಉಪಸ್ಥಿತರಿದ್ದರು.